ಹಾಸನ: ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ ಎಂದು ಚಂದನ ದೂರ ದರ್ಶನ ಕೇಂದ್ರದ ವಿಶ್ರಾಂತ ಮಹಾನಿರ್ದೇಶಕ ಮಹೇಶ್ ಜೋಶಿ ಹೇಳಿದ್ದಾರೆ.
ನಾನು ಸಂತ ಶಿಶುನಾಳ ಶರೀಫರ ಗುರುಗಳಾದ ಕಳಸದ ಗುರುಗೋವಿಂದ ಭಟ್ಟರ ವಂಶಸ್ಥ. ಈಗಾಗಲೇ ದೂರದರ್ಶನ ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ ರೂವಾರಿಯಾಗಿ, ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ವಿಸ್ತಾರಗೊಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಕನ್ನಡದ ಸೇವೆಯನ್ನು ಗುರುತಿಸಿ ಈಗಾಗಲೇ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸರಳೀಕರಣ, ಸುಧಾರಣೆ ಮತ್ತು ಶುದ್ಧೀಕರಣ ಮಾಡುವುದು ನನ್ನ ಮುಖ್ಯ ಗುರಿ. ಸಾಹಿತ್ಯ ಪರಿಷತ್ತಿಗೆ ಸದಸ್ಯರಾಗಲು ಸಾಕಷ್ಟು ಅಲೆಯುವ ಸ್ಥಿತಿ ಇದೆ. ಆನ್‌ಲೈನ್ ಮೂಲಕ ಕೇವಲ 15 ದಿನಗಳಲ್ಲಿ ಸದಸ್ಯತ್ವ ಹಾಗೂ ಗುರುತಿನ ಚೀಟಿ ನೀಡುವಂತಹ ವ್ಯವಸ್ಥೆ ಮಾಡಲಾಗುವುದು ಎಂದರು.
ಅಧ್ಯಕ್ಷನಾಗಿ ಆಯ್ಕೆಯಾದರೆ ಹಾಸನದಲ್ಲಿ ಹಲ್ಮಿಡಿ ಉತ್ಸವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸುವ ಗುರಿ ಹೊಂದಿದ್ದೇನೆ. ಐದು ವರ್ಷದ ಅಧಿಕಾರದ ಅವಧಿಯೊಳಗೆ ಜಿಲ್ಲೆಯಲ್ಲಿ ಅ.ನಾ.ಕೃ ಭವನ ನಿರ್ಮಾಣ ಮಾಡುವ ಇಚ್ಛೆ ಇದೆ. ಅಲ್ಲದೆ ಸಾಹಿತ್ಯ ಪರಿಷತ್ತಿನಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಧಾನ್ಯತೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ 2018ರಲ್ಲಿ ಸದಸ್ಯತ್ವ ಪಡೆದ 12,910 ಮತದಾರದಿದ್ದಾರೆ. ಜಾತಿ, ಧರ್ಮ, ಮತ, ವರ್ಗ, ಕುಲ ಹಾಗೂ ಪಕ್ಷ ಭೇದವಿಲ್ಲದೆ ಕನ್ನಡ ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ, ನೆಲ-ಜಲದ ಪ್ರಾಮಾಣಿಕ ಸೇವೆಗೆ ಕ್ರಿಯಾಶೀಲ ಸಂಘಟಕನಾಗಿ ನಾನು ಸೇವಾ ಆಕಾಂಕ್ಷಿಯಾಗಿದ್ದು, ನನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.