ಅರಕಲಗೂಡು: ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಗೆ ಶಾಸಕ ಎ.ಟಿ.ರಾಮಸ್ವಾಮಿ ಭೇಟಿ ನೀಡಿ ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚಿಸಿದರು. ಮಾರುಕಟ್ಟೆಯಲ್ಲಿ ಹರಾಜು ವಹಿವಾಟನ್ನು ಪರಿಶೀಲಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಆಂಧ್ರದ ಮಾದರಿಯಲ್ಲಿ ರೈತರು ಬೆಳೆದ ಕೆಳದರ್ಜೆಯ ತಂಬಾಕನ್ನು ಖರೀದಿಸಿ ರೈತರ ನಷ್ಟವನ್ನು ತಪ್ಪಿಸಬೇಕು ಎಂದು ತಿಳಿಸಿದರು.
ತಂಬಾಕು ಮಂಡಳಿಯಲ್ಲಿ ಸೇವಾಶುಲ್ಕ ಮತ್ತು ದಂಡದ ರೀತಿಯಲ್ಲಿ ರೈತರಿಂದ ಪಡೆದ 1 ಸಾವಿರ ಕೋಟಿ ರೂ ಹಣವಿದ್ದು, ಇದೇ ಹಣದ ಪೈಕಿ 200 ಕೋಟಿ ರೂ. ವಿನಿಯೋಗಿಸುವ ಮೂಲಕ ಖಾಸಗಿ ಕಂಪೆನಿಗಳು ಕಡಿಮೆ ಬೆಲೆಗೆ ಕೊಳ್ಳುವ ತಂಬಾಕನ್ನು ಮಂಡಳಿಯೇ ಕೊಂಡುಕೊಳ್ಳುವ ಮೂಲಕ ಬೆಳೆಗಾರರ ಸಹಾಯಕ್ಕೆ ನಿಲ್ಲುವುದು ಸೂಕ್ತವಾಗಿದೆ. ರೈತರು ಕಡಿಮೆ ದರ್ಜೆಯ ತಂಬಾಕನ್ನು ದಸರಾ ನಂತರ ಮಾರಾಟ ಮಾಡಿದರೆ ಹೆಚ್ಚಿನ ಬೆಲೆ ಸಿಗುವ ಸಾಧ್ಯತೆಯಿದ್ದು, ಬೆಳೆಗಾರರು ಈ ಕುರಿತು ಗಮನಹರಿಸಬೇಕು ಎಂದರು. ಮಾರುಕಟ್ಟೆಯ ಆವರಣದಲ್ಲಿ ಕ್ಯಾಂಟೀನ್ ವ್ಯವಸ್ಥೆ ನೀಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ ಅವರು, ರೈತರಿಗಾಗಿ ಇರುವ ಮೂಲಸೌಕರ್ಯಗಳು ಮತ್ತು ರೈತರ ಕುಂದುಕೊರತೆಗಳನ್ನು ಕುರಿತು ಚರ್ಚಿಸಿದರು.
ಹರಾಜು ಮಾರುಕಟ್ಟೆಯ ಅಧೀಕ್ಷಕ ಎಸ್.ದೇವಾನಂದ್, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ, ಜಿಲ್ಲಾ ಘಟಕದ ಹೊನಗಾನಹಳ್ಳಿ ಜಗದೀಶ್, ಬೆಳೆಗಾರರಸಂಘದ ಅಧ್ಯಕ್ಷ ನಿಲುವಾಗಿಲು ಈರಣ್ಣ, ಕಾರ್ಯದರ್ಶಿ ಬಿಳಗುಲಿ ಪುಟ್ಟರಾಜು, ಮುಖಂಡ ಕಣಿಯಾರು ಮಹೇಶ್, ಹನ್ಯಾಳು ರವೀಶ್, ಉಪ್ಪಾರಿಕೆಗೌಡ, ಸ್ವಾಮಿಗೌಡ ಮತ್ತು ರೈತರಿದ್ದರು.