ಹಾಸನ: ಹಿಂದಿನ ಕಾಲದ ಮಹಾಭಾರತದಲ್ಲಿ ಶ್ರೀಕೃಷ್ಣನಂತೆ ನ್ಯಾಯ ಮತ್ತು ಧರ್ಮ ಅರಿತು ಎಲ್ಲರೂ ಕೆಲಸ ಮಾಡಬೇಕು ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನವನ್ನು ಸರಳವಾಗಿ ಆಚರಿಸಲಾಯಿತು. ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಶ್ರೀ ಕೃಷ್ಣ ಧರ್ಮದ ಪರವಾಗಿ ನಿಂತು ಜಯಿಸಿದವರು. ಹಾಗಾಗಿ ಯಾವುದೇ ಕೆಲಸ ಮಾಡಿದರೂ ನ್ಯಾಯ ಧರ್ಮ ಅರಿತು ಮಾಡಬೇಕು. ಅಧರ್ಮ ತಾತ್ಕಾಲಿಕವಾಗಿ ಗೆಲುವಿನಂತೆ ಕಂಡರೂ ಅಂತಿಮವಾಗಿ ಗೆಲ್ಲುವುದು ಧರ್ಮವೇ, ಹಾಗಾಗಿ ನಮ್ಮ ಚಿಂತನೆಗಳು ಧರ್ಮದ ಆಧಾರ ಒಳಗೊಂಡಿರಬೇಕು ಎಂದರು.
ರಾಮಾಯಣ ಮಹಾಭಾರತಗಳಂತಹ ಮಹಾಕಾವ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದರಲ್ಲಿಯ ಚಿಂತನೆಗಳಿಗೆ ಹೊರ ದೇಶಗಳು ಆಕರ್ಷಿತರಾಗಿ ಅಳವಡಿಸಿಕೊಳ್ಳುತ್ತಿವೆ. ನಮ್ಮ ದೇಶದಲ್ಲಿ ನಮ್ಮದೇ ಆದ ಚಿಂತನೆಗಳು ಸಾರ್ವಕಾಲಿಕವಾಗಿದ್ದು, ಅವುಗಳನ್ನು ನಾವು ಅಳವಡಿಸಿಕೊಂಡು ಶ್ರೀಕೃಷ್ಣನಂತೆ ಧರ್ಮದ ಪರವಾಗಿ ನಿಲ್ಲಬೇಕು. ಮಹಾಭಾರತ ಕಾವ್ಯವು ಜೀವನದ ಬೆಲೆಯನ್ನು ತಿಳಿಸುವಂತಹದು. ಅದರಲ್ಲಿ ಒಂದೊಂದು ಪಾತ್ರಗಳು ಸಮಾಜದ ಅಂಗವನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದರು.