ಅರಕಲಗೂಡು: ಕೊಣನೂರು ರಾಮನಾಥಪುರದಲ್ಲಿನ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಸಕ್ತ ಸಾಲಿನ ಮಾರಾಟ ಪ್ರಕ್ರಿಯೆಗೆ ಸಂಸದ ಪ್ರಜ್ವಲ್ ರೇವಣ್ಣ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಮೊಮ್ಮಗನಾಗಿ ಹೊಗೆಸೊಪ್ಪು ಬೆಳೆಗಾರರ ಸಮಸ್ಯೆಯನ್ನು ಅರಿತಿದ್ದೇನೆ. ನಾನು ಕೇಂದ್ರದ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಹೊಗೆಸೊಪ್ಪಿಗೆ ಹೆಚ್ಚಿನ ಬೆಲೆ ದೊರಕಿಸುವ ಮತ್ತು ಕಾಫಿ ಬೆಳೆಗಾರರ ಹಿತ ಕಾಯಲು ಹೋರಾಟ ನಡೆಸುತ್ತೇನೆ. ಕೇಂದ್ರ ಸರ್ಕಾರ ರೈತ ವಿರೋಧಿ ನಿಲುವನ್ನು ತಳೆಯುತ್ತಿದ್ದರೂ ಸಹ ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ರಾಜ್ಯದ ರೈತರ ಪರ ಧ್ವನಿ ಎತ್ತುತ್ತಿಲ್ಲ.
ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ 2 ಸಾವಿರ ರೂ ಹಣಕ್ಕಾಗಿ ರೈತರು ಬ್ಯಾಂಕ್ ಬಳಿ ಭಿಕ್ಷುಕರಂತೆ ನಿಲ್ಲಬೇಕಾಗಿದೆ. ಬಿಜೆಪಿ ಪಕ್ಷವನ್ನು ಬೆಂಬಲಿಸಿದ ತಪ್ಪಿಗೆ ಜನ ಜಿಎಸ್‌ಟಿ ಬರೆ ಅನುಭವಿಸಬೇಕಾಗಿದೆ.
ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂದೆ ವಿದೇಶಿ ನೇರ ಬಂಡಾವಳ ಹೂಡಿಕೆ ನೀತಿ ಜಾರಿಗೊಳಿಸುವ ಸಂಚು ರೂಪಿಸಿದೆ. ಇದರಿಂದ ತಂಬಾಕು ಕೊಳ್ಳುವ ಕಂಪನಿಗಳಷ್ಟೇ ಅಲ್ಲದೆ ಬೆಳೆಗಾರರಿಗೂ ಅನ್ಯಾಯವಾಗಲಿದೆ ಎಂದರು.