ಹಾಸನ : ನಮ್ಮ ಜಿಲ್ಲೆ ಲೂಟಿಕೋರರ ಕೈಗೆ ಸಿಕ್ಕಿ ಒದ್ದಾಡುವ ಪರಿಸ್ಥಿತಿಗೆ ತಲುಪಿದೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಗಂಭೀರ ಆರೋಪ ಮಾಡಿದರು.
ಜಿಲ್ಲೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿದೆ. ಒಬ್ಬ ನಿವೃತ್ತ ನಿರೀಕ್ಷಕನ ಹುದ್ದೆಗೆ 20 ಲಕ್ಷ ರೂ. ಮತ್ತು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಹುದ್ದೆಗೆ ₹1 ಕೋಟಿವರೆಗೂ ಲಂಚ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ರು.
ನಾನು 21 ವರ್ಷ ಶಾಸಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆದರೆ, ಇಂತಹ ವರ್ಗಾವಣೆ ದಂಧೆ ಕಂಡಿರಲಿಲ್ಲ. ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲದಾಗಿದೆ. ಅಧಿಕಾರಿಗಳು ತಮ್ಮ ಆತ್ಮಸಾಕ್ಷಿ ಬಿಟ್ಟು ನಡೆದುಕೊಳ್ಳಬೇಡಿ, ಮುಂದೆ ನಿಮ್ಮ ಕುಟುಂಬಕ್ಕೆ ತೊಂದರೆಯಾಗಬಹುದು ಎಂದು ಎಚ್ಚರಿಸಿದರು.
ಹಿಂದೆ ಜಿಲ್ಲೆಗೆ ಬಂದಿದ್ದ 120 ಕೋಟಿ ರೂ. ವಾಪಸ್ಸಾಯಿತು ಎಂದು ವಿಧಾನಪರಿಷತ್ ಸದಸ್ಯ ಆರೋಪ ಮಾಡಿದರು. ಆದರೆ, ಜಿಲ್ಲಾ ಪಂಚಾಯತ್ ಸದಸ್ಯರ ಸರ್ವಾನುಮತ ಪಡೆದಿದ್ದರೆ ಹಣ ವಾಪಸ್ ಆಗುತ್ತಿರಲಿಲ್ಲ. ಕೇವಲ ಅವರು ಕ್ಷೇತ್ರದ ಹಿತಕ್ಕಿಂತ ತಮ್ಮ ಹಿತಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ನೀಡಿದರು ಎಂದು ಕುಟುಕಿದರು. ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಪ್ರಧಾನಿಯವರೇ ಹೇಳಬೇಕು, ಅವರಿಗೆ ದೇಶದ ಎಲ್ಲಾ ರಾಜ್ಯಗಳ ಮಾಹಿತಿ ಇರುತ್ತದೆ.
ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆಯಿದೆ. ಖಾಸಗಿ ಸಂಸ್ಥೆಯೊಂದಿಗೆ ಸರ್ಕಾರ ಶಾಮೀಲಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸಕಲೇಶಪುರದಲ್ಲಿ ಒಂದು ಕಾಲೇಜ್ ಮುಚ್ಚಲು ಹೊರಟಿರುವ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕುಮಾರಸ್ವಾಮಿ ಸರ್ಕಾರದಲ್ಲಿ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾವಿರಾರು ಶಾಲಾ-ಕಾಲೇಜುಗಳನ್ನು ನಿರ್ಮಾಣ ಮಾಡಲಾಗಿತ್ತು. ಸರ್ಕಾರಿ ಶಾಲಾ- ಕಾಲೇಜುಗಳನ್ನು ಮುಚ್ಚಿದರೆ ಅದನ್ನ ಓಪನ್ ಮಾಡೋದು ನನಗೆ ಗೊತ್ತಿದೆ ಎಂದು ಖಾರವಾಗಿ ಮಾತನಾಡುತ್ತಾ ಸವಾಲೆಸೆದರು.
ಮುಖ್ಯಮಂತ್ರಿ ಬದಲಾವಣೆ, ಮಂತ್ರಿಗಳ ಕಸರತ್ತು ಇದ್ಯಾವುದು ನನಗೆ ಗೊತ್ತಿಲ್ಲ. ನನ್ನ ಜಿಲ್ಲೆಯಲ್ಲಿ ರೈತರ ಪ್ರಾಣ ಉಳಿಯಬೇಕು. ವರ್ಗಾವಣೆಯ ದಂಧೆ ನಿಲ್ಲಬೇಕು ಅಷ್ಟೇ.. ಇವೆಲ್ಲವನ್ನು ಸಮಯ ಬಂದಾಗ ದಾಖಲೆ ಸಮೇತ ನಿಮ್ಮ ಮುಂದೆ ಇಡುತ್ತೇನೆ ಎಂದರು.