ಹಾಸನ: ಬಾರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಹಳೇಬೀಡಿನ ಜನರು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಹಳೇಬೀಡು ಗ್ರಾಮದ ಬಿದರಿಕೆರೆ ರಸ್ತೆಯಲ್ಲಿರುವ ಲಕ್ಷ್ಮೀ ಬಾರ್ ಪ್ರಾರಂಭವಾಗಿರುವ ದಿನದಿಂದ ಇಲ್ಲಿವರೆಗೂ ಇಲ್ಲಿನ ಸುತ್ತ ಮುತ್ತಲ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗಿದೆ. ರಾತ್ರಿಯ ಸಮಯದಲ್ಲಿ ಕುಡಿದ ಅಮಲಿನಲ್ಲಿ ಕುಡುಕರು ಅವಾಚ್ಯ ಶಬ್ದಗಳಿಂದ ಮಾತನಾಡಿದಲ್ಲದೇ, ಜೋರಾಗಿ ಕೂಗುವುದರಿಂದ ಮನೆಯೊಳಗೆ ಓದುವ ವಿದ್ಯಾರ್ಥಿಗಳಿಗೆ ತೊದರೆ ಉಂಟಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಕುಡುಕರ ಕೆಟ್ಟ ಪದಗಳು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೆ ಪಕ್ಕದಲ್ಲಿ ಗೂಡಂಗಡಿ ಹಾಗೂ ಮಾಂಸದಗಡಿಗಳು ಇರುವುದರಿಂದ ಸುತ್ತ ಮುತ್ತಲಿರುವ ಕೆರೆಗಳು ಹಾಗೂ ಉತ್ತಮ ಪರಿಸರ ಹಾಳಾಗುತ್ತಿದೆ. ದುರ್ವಾಸನೆ ಬರುವುದಲ್ಲದೇ ನಾನಾ ಸಾಂಕ್ರಾಮಿಕ ರೋಗಗಳು ಹರಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಾರ್ ಇರುವ ಸ್ಥಳದಲ್ಲಿ ವಾಹನ ದಟ್ಟಣೆ, ಜನಸಂದನೆ ಹೆಚ್ಚು ಇರುವುದರಿಂದ ಪ್ರತಿನಿತ್ಯ ಮೂರರಿಂದ ನಾಲ್ಕು ಸರಣಿ ಅಪಘಾತಗಳು ಸಂಭವಿಸುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೂ ದೂರು ನೀಡಿದ್ದರೂ ಇದುವರೆಗೂ ಯಾವ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಕೂಡಲೇ ಈ ಬಾರನ್ನು ಬೇರೆಡೆಗೆ ಸ್ಥಳಂತರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.