ಹಾಸನ: ಮಹಿಳೆ ಕಾಡಾನೆ ತುಳಿತದಿಂದ ಸಾವನ್ನಪ್ಪಿದ ಘಟನೆ ಸಕಲೇಶಪುರ ತಾಲೂಕಿನ ಬೆಳಗೊಡು ಸಮೀಪದ ವಡೂರು ಗ್ರಾಮದಲ್ಲಿ ನಡೆದಿದೆ. ಕವಿತಾ (35) ಮೃತರು. ಇಂದು ಬೆಳಗ್ಗೆ ಮನೆಯ ಹಿಂಭಾಗದ ಕಾಫಿತೋಟಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಆನೆ ಮಹಿಳೆಯ ಹೊಟ್ಟೆಯ ಭಾಗಕ್ಕೆ ಕಾಲಿಟ್ಟಿದ್ದು, ಸಾವು-ಬದುಕಿನಲ್ಲಿದ್ದ ಆಕೆಯನ್ನು ತಕ್ಷಣವೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾಳೆ.
ಕವಿತಾ ಮೂಲತಃ ಬೇಲೂರು ತಾಲೂಕಿನ ನಾರ್ವೆ ಗ್ರಾಮದವರು. ಇತ್ತೀಚೆಗೆ ಸಂಬಂಧಿಕರಾದ ಜಗಯ್ಯ ಎಂಬವರ ಮನೆಯಲ್ಲಿ ವಾಸವಿದ್ದ ತನ್ನ ತಾಯಿಯನ್ನು ನೋಡಲು ಬಂದಿದ್ದರು. ಕಳೆದ ವರ್ಷ ಪತಿಯನ್ನು ಕಳೆದುಕೊಂಡಿದ್ದರು. ಎರಡು ಮಕ್ಕಳ ಜವಾಬ್ದಾರಿ ಹೊತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಸಕಲೇಶಪುರ ತಾಲೂಕಿನಲ್ಲಿ 60 ರಿಂದ 70 ಕಾಡಾನೆಗಳಿದ್ದು, ಆಹಾರ ಹುಡುಕಿಕೊಂಡು ಕಾಫಿ ತೋಟಗಳಿಗೆ ಬರುತ್ತಿವೆ. ಕಾಡಾನೆಗಳನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಅಲ್ಲದೇ ಆನೆ ಕಾರಿಡಾರ್ ಮಾಡಬೇಕೆಂಬ ಕೂಗು ದಶಕಗಳಿಂದ ಕೇಳಿ ಬರುತ್ತಿದ್ದರೂ ಯಾವುದೇ ಶಾಶ್ವತ ಪರಿಹಾರವನ್ನು ಸರ್ಕಾರ ಒದಗಿಸಿಲ್ಲ ಎಂದು ಕೆಲವು ಸಂಘಟನೆಗಳು ಹಾಸನದಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.
ಮೃತರ ಕುಟುಂಬಕ್ಕೆ ಸರ್ಕಾರದಿಂದ 15 ಲಕ್ಷ ರೂ ಪರಿಹಾರದ ಚೆಕ್ ವಿತರಿಸಲಾಗಿದೆ.
ವಯೋವೃದ್ಧ ಕಾರ್ಮಿಕನ ಮೇಲೆ ಕಾಡಾನೆ ದಾಳಿ: ತಿಂಗಳ ಹಿಂದೆ ಕೊಡಗು ಜಿಲ್ಲೆಯ ಕಂಬಿಬಣೆ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡಿ ಬರುತ್ತಿದ್ದಾಗ ವಯೋವೃದ್ಧ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಜರುಗಿತ್ತು. ಭೂತನಕಾಡು ಟಾಟಾ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ರಾಮಸ್ವಾಮಿ ಎಂಬವರು ಸಂಜೆ ವೃಂದಾವನ ತೋಟದಲ್ಲಿ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಕಾಡಾನೆ ಪ್ರತ್ಯಕ್ಷವಾಗಿದೆ. ಅದೃಷ್ಟವಾಶಾತ್ ಅವರ ಹಿಂದೆ ಬರುತ್ತಿದ್ದ ತೋಟದ ರೈಟರ್ ಆನೆಯನ್ನು ಕಂಡು ಜೋರಾಗಿ ಬೊಬ್ಬಿಟ್ಟಿದ್ದಾರೆ. ಕಿರುಚಾಟಕ್ಕೆ ಕಾಡಾನೆ ರಾಮಸ್ವಾಮಿಯವರನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ. ತೋಟದ ರೈಟರ್ ಅವರಿಂದಾಗಿ ರಾಮಸ್ವಾಮಿ ಸಾವಿನ ದವಡೆಯಿಂದ ಪಾರಾಗಿದ್ದರು. ಆದರೆ ಕಾಲಿಗೆ ಗಂಭೀರ ಗಾಯವಾಗಿದ್ದು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಡಗಿನಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಕೊಡಗು ದಟ್ಟ ಕಾಡು ಪ್ರದೇಶವಾಗಿದ್ದು, ಇಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಆಗಾಗ್ಗೆ ನಡೆಯುತ್ತಿವೆ.
ಇದನ್ನೂಓದಿ : ಬೀದಿ ನಾಯಿ ರಕ್ಷಿಸಿದ ಕುಟುಂಬದ ಮೇಲೆ ದ್ವೇಷ: ಬಾಲಕನ ಥಳಿಸಿ ಕೊಂದ ನೆರೆಮನೆ ವ್ಯಕ್ತಿ