ಅರಕಲಗೂಡು: ತಾಲೂಕಿನ ಮದಲಾಪುರ ಗ್ರಾಮದಲ್ಲಿ ರೈತರು ತಾವು ಬೆಳೆದ ಮೆಣಸಿನ ಕಾಯಿ ಬೆಳೆಗೆ ಉತ್ತಮ ಬೆಲೆ ಸಿಗದೇ ಮನ ನೊಂದು ಉತ್ತು ನಾಶಪಡಿಸಿದ್ದು, ಸ್ಥಳಕ್ಕೆ ಗುರುವಾರ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ರೈತರು ಬೆಳೆ ನಷ್ಟದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಬೆಳೆ ಮಾರಾಟಕ್ಕೆ ಯಾವುದೇ ತೊಂದರೆ ಇಲ್ಲ, ಯಾವ ರೈತರೂ ಈ ರೀತಿ ಬೆಳೆ ನಷ್ಟ ಮಾಡಬಾರದು ಎಂದು ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮನವಿ ಮಾಡಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿ, ಇಲ್ಲಿ ನವೆಂಬರ್ ತಿಂಗಳಲ್ಲಿ ಮೆಣಸಿನ ಸಸಿ ನೆಡಲಾಗಿದ್ದು ಬೆಳೆ ಫಸಲು ಅವಧಿ ಈವರೆಗೆ ಮುಕ್ತಾಯಗೊಳ್ಳಲಿದೆ. ಲಾಕ್‌ಡೌನ್ ಪರಿಣಾಮ ಬೆಲೆ ಸಿಗದೇ ರೈತರು ಬೆಳೆ ಉಳುಮೆ ನಡೆಸಿಲ್ಲ. ಮೊದಲೇ ಇಲಾಖೆ ಗಮನಕ್ಕೆ ತಂದಿದ್ದರೆ ಅರಕಲಗೂಡು ಎಪಿಎಂಸಿ ಯಲ್ಲಿ ಖರೀದಿಸಲು ಅವಕಾಶವಿತ್ತು ಎಂದರು.
ಸರ್ಕಾರ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಈ ತನಕ ಯಾವುದೇ ಹಣ ನೀಡಿಲ್ಲ. ಸರ್ಕಾರ ಪರಿಹಾರ ಒದಗಿಸಿದರೆ ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.
ಇದರಿಂದ ಅಸಮಾಧಾನ ಹೊರ ಹಾಕಿದ ರೈತರು ಲಕ್ಷಾಂತರ ರೂಪಾಯಿ ಹಣ ವ್ಯಯಿಸಿ ಬೆಳೆದ ಮೆಣಸಿನ ಕಾಯಿಗೆ ಉತ್ತಮ ಬೆಲೆ ಸಿಗದೇ ಉತ್ತು ಹಾಕಲಾಗಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿದರೆ ಹೊರತು ಬೆಳೆ ನಷ್ಟವಾಗಿರುವುದಕ್ಕೆ ಪರಿಹಾರ ನೀಡುವ ಕುರಿತು ಯಾವುದೇ ಭರವಸೆಯನ್ನು ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.