ಹಾಸನ: ನಗರದ ಕನ್ನಡ ಸಾಹಿತ್ಯ ಪರಿಷತ್ ಭವನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಜಿಲ್ಲಾ ಮಟ್ಟದ ದಲಿತ ಸಭೆಯಲ್ಲಿ ದಲಿತ ಮುಖಂಡರು ಸಮಸ್ಯೆಗಳ ಸುರಿಮಳೆಗೈದರು.
ಅಟ್ರಾಸಿಟಿ ಕೇಸಿಗೆ ಕೌಂಟರ್ ಕೇಸ್ ಹಾಕುವ ಮೂಲಕ ಪ್ರಕರಣಗಳನ್ನು ದಿಕ್ಕು ತಪ್ಪಿಸುವ ತಂತ್ರಗಾರಿಕೆ ನಡೆಯುತ್ತಿದ್ದು, ಇದರಿಂದ ದಲಿತ ಸಮುದಾಯಕ್ಕೆ ತುಂಬಾ ಅನ್ಯಾಯವಾಗುತ್ತಿದೆ. ಪ್ರಕರಣ ಕುರಿತು ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಸುಖಾಸುಮ್ಮನೆ ಅಟ್ರಾಸಿಟಿ ಬದಲಿಗೆ ಕೌಂಟರ್ ಕೇಸ್ ಹಾಕುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿದ್ದ ದಲಿತ ಮುಖಂಡರಾದ ಹೆಚ್.ಕೆ.ಸಂದೇಶ್, ಆರ್ಪಿಐ ಸತೀಶ್, ಮೆರಿ ಜೋಸೆಫ್, ಕೆ. ಪ್ರಕಾಶ್ , ಜಗದೀಶ್ ಚೌಡಹಳ್ಳಿ, ಅಂಬುಗಮಲ್ಲೇಶ್ ಎಸ್ಪಿಗೆ ಒಕ್ಕೊರಲ ಮನವಿ ಮಾಡಿದರು.
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಇದರಿಂದ ದಲಿತ ಸಮುದಾಯದವರೇ ಹೆಚ್ಚು ಕುಡಿತಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕು ಹಾಗೂ ಎಸ್ಪಿ ಡ್ಯೂಟಿ ಪೊಲೀಸರನ್ನು ಬದಲಾಯಿಸಿ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ದಂಡೋರ ವಿಜಯಕುಮಾರ್ ಆಗ್ರಹಿಸಿದರು.
ಇನ್ನು ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಗ್ರಾಪಂ ಮಟ್ಟದಲ್ಲಿ ಜನ ಸಂಪರ್ಕ ಸಭೆ ಕರೆಯಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ದಲಿತರು ನೀಡುವ ಪ್ರಕರಣಗಳಿಗೆ ಸಹಕಾರ ನೀಡಬೇಕು ಎಂದು ಕೆಲವರು ಸಭೆಯ ಗಮನಕ್ಕೆ ತಂದರು.
ಸಮಸ್ಯೆಗಳನ್ನು ಆಲಿಸಿದ ಎಸ್ಪಿ ಶ್ರೀನಿವಾಸಗೌಡ, ಸಭೆಯಲ್ಲಿ ಗಮನಕ್ಕೆ ತಂದಿರುವ ಎಲ್ಲಾ ಸಮಸ್ಯೆ ಹಾಗೂ ದೂರುಗಳನ್ನು ಶೀಘ್ರವಾಗಿ ಬಗೆಹರಿಸಿ ದಲಿತ ಸಮುದಾಯದೊಂದಿಗೆ ಇಲಾಖೆ ಸದಾ ಜೊತೆಯಲ್ಲಿ ಇರುವುದಾಗಿ ಹೇಳಿದರು.