ಹಾಸನ : ಮೂರ್ನಾಲ್ಕು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ 7 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ 4 ಟಿಎಂಸಿ ನೀರು ಹೆಚ್ಚಾಗಿರುವುದರಿಂದ ಜಿಲ್ಲೆಯ ಜನರಿಗೆ ಮತ್ತು ರೈತರ ಮೊಗದಲ್ಲಿ ಸಂತಸ ಮೂಡಿದೆ.
ನಾಳೆಯಿಂದ (ಜೂನ್ 20) ಪುಷ್ಯ ಮಳೆ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಇದರ ಜೊತೆಗೆ ಅಗಸ್ಟ್ 3ರಿಂದ ಆಶ್ಲೇಷ ಮಳೆಯು ಪ್ರಾರಂಭವಾಗುವುದರಿಂದ 4-5 ದಿನದಲ್ಲಿ ಡ್ಯಾಂ ತುಂಬುವ ಸಾಧ್ಯತೆಯಿದೆ. ಕಳೆದ ಬಾರಿಯೂ ಆಶ್ಲೇಷ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿತ್ತು. ಮಲೆನಾಡು ಭಾಗ ಸಕಲೇಶಪುರ ನಗರ ಭಾಗಶಃ ನೀರಿನಲ್ಲಿ ಮುಳುಗಿತ್ತು. ಈ ಬಾರಿಯೂ ಆಶ್ಲೇಷ ಮಳೆ ಹೆಚ್ಚಾದ್ರೆ, ಹೇಮಾವತಿ ನದಿ ತುಂಬುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಇನ್ನು, ಕಳೆದ ಬಾರಿ ಇದೇ ಸಮಯಕ್ಕೆ ಗೋರೂರಿನ ಶೆಟ್ಟಿಹಳ್ಳಿ ಚರ್ಚ್ ಅರ್ಧಭಾಗ ತುಂಬಿತ್ತು. ಈ ಬಾರಿಯೂ ಪುಷ್ಯ ಮತ್ತು ಆಶ್ಲೇಷ ಮಳೆಯಾದ್ರೆ ಬಹುತೇಕ ಚರ್ಚ್ ಮುಳುಗುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಸಮಯದಲ್ಲಿ ಯುವಕರು ಜಲಕ್ರೀಡೆಯಾಡಲು ತಂಡೋಪತಂಡವಾಗಿ ಬರುತ್ತಾರೆ. ಈ ಬಾರಿ ಕೊರೊನಾ ಇರುವುದರಿಂದ ಪ್ರವಾಸಿಗರ ಸಂಖ್ಯೆ ಕೂಡ ಕಡಿಮೆಯಿದೆ. ಕೊರೊನಾ ಹಾಗೂ ಮಳೆಯಿಂದಾಗಿ ಕೆಲವರು ಜಲಕ್ರೀಡೆಯಾಡಲು ಸಾಧ್ಯವಾಗದೇ ವಾಪಸ್ಸಾಗುತ್ತಿದ್ದಾರೆ.
ಹೇಮಾವತಿ ಜಲಾಶಯದ ಇಂದಿನ ವರದಿ : ಗರಿಷ್ಠ ಮಟ್ಟ: 37.103 ಟಿಎಂಸಿ ಅಂದರೆ 2,922.00 ಅಡಿಗಳಷ್ಟು ಸಾಮರ್ಥ್ಯವನ್ನ ಹೊಂದಿದೆ. ಇಂದು ಜಲಾಶಯಕ್ಕೆ 16.31 ಟಿಎಂಸಿ ನೀರು ಶೇಖರಣೆಯಾಗಿದೆ. ಇನ್ನು, ಚಿಕ್ಕಮಗಳೂರು ಮತ್ತು ಮೂಡಿಗೆರೆ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಒಳ ಹರಿವಿನ ಪ್ರಮಾಣದಲ್ಲಿಯೂ ಏಕರಿಯಾಗಿದೆ. ಇಂದು 7032 ಕ್ಯೂಸೆಕ್ ನೀರು ಹರಿದು ಬಂದಿದೆ. ಅಲ್ಲದೇ, ಡ್ಯಾಂನಲ್ಲಿ ಸುಮಾರು 11.94 ಟಿಎಂಸಿ ನೀರು ಬಳಕೆಗೆ ಯೋಗ್ಯವಿದ್ದು, ಇಂದು 2,300 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಡ್ಯಾಂ ತುಂಬುವ ಮುನ್ನವೇ ಹೊಳೆಯ ಮೂಲಕ ತಮಿಳುನಾಡಿಗೆ ನೀರು ಹರಿಬಿಟ್ಟಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.