ಚನ್ನರಾಯಪಟ್ಟಣ/ಹಾಸನ: ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ತೆರೆ ಕಂಡಿದ್ದು, ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆ ಚನ್ನರಾಯಪಟ್ಟಣದ ಪುನೀತ್ ಅಭಿಮಾನಿ ಬಿ. ಎಲ್. ಅರುಣ್ ಕುಮಾರ್ ಮತ್ತು ಅವರ ತಂಡ ಹಲವು ಸಾಮಾಜಿಕ ಸಂಸ್ಥೆಗಳ ಜೊತೆಗೂಡಿ ಇಂದು ನೇತ್ರದಾನ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದಾರೆ.
ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಇನ್ನೂ ಜೀವಂತವಾಗಿರುವ ಪುನೀತ್ ರಾಜಕುಮಾರ್, ಎಂದೆಂದಿಗೂ ಅಜರಾಮರ. ಮರಣದ ನಂತರ ಅಪ್ಪು ತನ್ನ 2 ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದರು. ಅಪ್ಪು ಮಾನವೀಯ ಕಾರ್ಯವನ್ನೇ ಮಾದರಿಯಾಗಿ ತೆಗೆದುಕೊಂಡ ಚನ್ನರಾಯಪಟ್ಟಣದ ಪುನೀತ್ ಅಭಿಮಾನಿಯಾಗಿರುವ ಬಿ. ಎಲ್. ಅರುಣ್ ಕುಮಾರ್ ಮತ್ತು ಅವರ ತಂಡ, ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಸೈನ್ಸ್, ಬ್ರೈಟ್ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಇಂದು ನೇತ್ರದಾನ ಶಿಬಿರ ಮತ್ತು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಾರೆ.
ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕಳಕಳಿಗೆ ನಾವೆಲ್ಲರೂ ಕೈಜೋಡಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕಿಸುವ ನಿಟ್ಟಿನಲ್ಲಿ ರಕ್ತದಾನ ಮತ್ತು ನೇತ್ರದಾನ ಮಾಡುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸೋಣ ಅಂತಾ ಅರುಣ್ ಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪಂಜಾಬ್ ಸಿಎಂ ಭಗವಂತ್ ಮಾನ್ ಪದಗ್ರಹಣದ ವೇಳೆ 7 ವರ್ಷದ ಬಳಿಕ ತಾಯಿಗೆ ಪುತ್ರ ಸಿಕ್ಕ!