ಹಾಸನ: ನಿಯಮ ಮೀರಿ ಹಾಕಲಾಗಿದ್ದ ಫ್ಲೆಕ್ಸ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ನಗರಸಭೆಯ ಆಯುಕ್ತರ ವಿರುದ್ಧ ಬಿಜೆಪಿ ಕಾರ್ಯಕರ್ತರು ಏಕವಚನದಲ್ಲೇ ಸಂಬೋಧಿಸಿದ ಘಟನೆ ಅರಸೀಕೆರೆಯಲ್ಲಿ ನಡೆದಿದೆ.
ಆಯುಕ್ತರನ್ನು ಏಕವಚನದಲ್ಲಿ ನಿಂದಿಸಿದವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಬೆಂಬಲಿಗರು ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಯವರ ಆಪ್ತ ರಾಜಕೀಯ ಕಾರ್ಯದರ್ಶಿಯಾಗಿರುವ ಎನ್.ಆರ್.ಸಂತೋಷ್ ಜನ್ಮ ದಿನದ ಅಂಗವಾಗಿ ಅರಸೀಕೆರೆಯ ಬಹುತೇಕ ಕಡೆ ನಿಯಮ ಬಾಹಿರವಾಗಿ ಫ್ಲೆಕ್ಸ್ ಹಾಕಲಾಗಿತ್ತು. ಈ ಸಂಬಂಧ ನಗರಸಭೆಯ ಆಯುಕ್ತ ಕಾಂತರಾಜು ಅವರು ನಿಯಮಮೀರಿ ಹಾಕಲಾಗಿದ್ದ ಬ್ಯಾನರ್ಗಳನ್ನುತಡರಾತ್ರಿ ತೆರವುಗೊಳಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾರ್ಯಕರ್ತರು, ಆಯುಕ್ತರನ್ನ ಏಕವಚನದಲ್ಲಿಯೇ ನಿಂದಿಸಿದರು. ಪೊಲೀಸರ ಸಮ್ಮುಖದಲ್ಲಿಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ನಾವು ಹಾಕಿದ್ರೆ ಮಾತ್ರ ತೆರವುಗೊಳಿಸಲು ಮುಂದಾದ ನೀವು, ಜೆಡಿಎಸ್, ಕಾಂಗ್ರೆಸ್ನವರು ಹಾಕಿದ್ರೆ ಸುಮ್ಮನಿರ್ತಿಯಾ...? ಇದು ಬೆಳ್ಳಿಪ್ರಕಾಶ್ ಕ್ಷೇತ್ರವಲ್ಲ. ಇದು ಅರಸೀಕೆರೆ. ನಮಗೂ ರಾಜಕೀಯ ಮಾಡುವುದಕ್ಕೆ ಗೊತ್ತು. ಸಂತೋಷ್ ಅವರ ಹುಟ್ಟುಹಬ್ಬಕ್ಕೆ ಹಾಕಿದ್ದೇವೆ. ಏನಿವಾಗ? ಅವರು ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ. ಅವರ ಬ್ಯಾನರ್ ಹರಿದು ಹಾಕಲು ಎಷ್ಟೋ ಧೈರ್ಯ ನಿನಗೆ ಎಂದು ಏಕವಚನದಲ್ಲಿಯೇ ಆಯುಕ್ತರಿಗೆ ಮಾತನಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನಗರದಲ್ಲಿ ಐದು ಫೆಕ್ಸ್ ಮಾತ್ರ ಹಾಕಲು ಅನುಮತಿ ನೀಡುತ್ತೇನೆ. ಎಲ್ಲವನ್ನ ತೆಗೆದುಹಾಕಿ ಎಂದು ಆಯುಕ್ತರು ಹೇಳಿದರು.
ಇದಕ್ಕೆ ಕುಪಿರಾದ ಬಿಜೆಪಿ ಕಾರ್ಯಕರ್ತರು, ತೆಗೆಸುವುದಾದ್ರೆ ನಗರದ ಎಲ್ಲಾ ಬ್ಯಾನರ್ ತೆಗೆದುಹಾಕಿ, ಒಂದೂ ಇರಬಾರದು. ನಮ್ಮದನ್ನು ತೆಗೆದುಹಾಕಿ ಬೇರೆಯವರದ್ದನ್ನು ತೆಗೆಯದೇ ಇದ್ರೆ ನಾವು ಸುಮ್ಮನಿರೋದಿಲ್ಲ ಎಂದು ಧಮ್ಕಿ ಹಾಕಿದರು.
ಬಳಿಕ ಟ್ರ್ಯಾಕ್ಟರ್ ತಂದು ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ಹಾಕಲಾಗಿದ್ದ ಎಲ್ಲಾ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ಆಯುಕ್ತರು ತೆರೆವುಗೊಳಿಸಿದ್ರು.
ಬಿಜೆಪಿ ಕಾರ್ಯಕರ್ತರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.