ಹಾಸನ: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಾಸನಕ್ಕೆ ಮೊದಲ ಸ್ಥಾನ ಸಿಕ್ಕಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭವಾನಿ ರೇವಣ್ಣ, ಮೊದಲ ಸ್ಥಾನ ಬಂದಿರುವುದು ನಿಜಕ್ಕೂ ಖುಷಿ ತಂದಿದೆ. ನಾನು ಹಾಕಿಕೊಂಡಿದ್ದ ಕಾರ್ಯಕ್ರಮಗಳಿಗೆ ತಕ್ಕಂತೆ ಫಲಿತಾಂಶವನ್ನು ಭಗವಂತ ಕೊಟ್ಟಿದ್ದಾನೆ ಎಂದರು.
ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನಕ್ಕೆ ಬರಲು ನನ್ನ ಪತ್ನಿ ಭವಾನಿಯೇ ಕಾರಣ ಎಂದು ಸಚಿವ ರೇವಣ್ಣ ಹೇಳಿಕೆ ನೀಡಿದ್ದರು. ಇದನ್ನು ಸಮರ್ಥಿಸಿಕೊಂಡಿರುವ ರೇವಣ್ನ ಪತ್ನಿ ಭವಾನಿ ರೇವಣ್ಣ, ಯಾರು ಏನೇ ಅನ್ನಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಫಲಿತಾಂಶದ ಬಗ್ಗೆ ಪ್ರಯತ್ನ ಪಟ್ಟವರಿಗೆ ಮಾತ್ರ ಅದರ ಕಷ್ಟ ಏನೆಂದು ತಿಳಿದಿರುತ್ತದೆ ಎಂದು ಹೇಳಿದರು.
ಇನ್ನು ನಾನು ಮಾಡಿದ ಸಭೆಗಳಲ್ಲಿ ಜಿಲ್ಲೆಯ ಕೆಲವು ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು. ಅವರಿಗೆ ಗೊತ್ತಿದೆ ಎಸ್ ಎಸ್ ಎಲ್ ಸಿ ಫಲಿತಾಂಶ ಬರುವುದಕ್ಕೆ ಯಾರು ಕಾರಣ ಎಂದು. ಮೂರು ವರ್ಷಗಳ ಹಿಂದೆ 31ನೇ ಸ್ಥಾನದಲ್ಲಿದ್ದ ಜಿಲ್ಲೆ ಕಳೆದ ವರ್ಷ ಏಳನೇ ಸ್ಥಾನಕ್ಕೆ ಬಂದಿತ್ತು. ಈ ಬಾರಿ ಮೊದಲ ಸ್ಥಾನ ಪಡೆದಿದೆ. ಇದು ನನಗೆ ಬಹಳ ಖುಷಿ ತಂದಿದೆ ಎಂದರು
ಈ ಫಲಿತಾಂಶಕ್ಕೆ ಕೇವಲ ನಮ್ಮ ಕುಟುಂಬ ವರ್ಗ ಮಾತ್ರ ಕಾರಣವಲ್ಲ. ಈ ಫಲಿತಾಂಶಕ್ಕೆ ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಪ್ರಯತ್ನ ದೊಡ್ಡದು ಎಂದಿದ್ದಾರೆ ಭವಾನಿ ರೇವಣ್ಣ.