ಸಕಲೇಶಪುರ (ಹಾಸನ): ತಾಲೂಕಿನಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಕಂಡು ಬರದಂತೆ ಎಚ್ಚರಿಕೆ ವಹಿಸಿರುವ ಪ್ರಾಮಾಣಿಕ ಅಧಿಕಾರಿ ತಹಶೀಲ್ದಾರ್ ಮಂಜುನಾಥ್ ಅವರನ್ನು ವಿನಾಕಾರಣ ವರ್ಗಾವಣೆ ಮಾಡಿದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ಎಚ್ಚರಿಕೆ ನೀಡಿದರು.
ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಅವರಿಗೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಿ ಬಳಿಕ ಮಾತನಾಡಿದರು.
ತಹಶೀಲ್ದಾರ್ ಮಂಜುನಾಥ್ ಇದುವರೆಗೂ ಕೊರೊನಾ ಪ್ರಕರಣ ತಾಲೂಕಿನಲ್ಲಿ ವರದಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುತ್ತಾರೆ. ಕಡ್ಡಾಯ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನಜಾಗೃತಿ ಮೂಡಿಸಲು ಮೂರು ತಿಂಗಳಿನಿಂದ ಸತತ ಶ್ರಮ ಹಾಕಿದ್ದಾರೆ ಎಂದು ತಿಳಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ಹೊರರಾಜ್ಯದಿಂದ ಕೂಲಿ ಅರಸಿ ಬಂದಿದ್ದಂತಹ ಅಸ್ಸೋಂ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ತೆಲಂಗಾಣ, ಉತ್ತರ ಪ್ರದೇಶ, ತಮಿಳುನಾಡಿನ ಕೂಲಿ ಕಾರ್ಮಿಕರನ್ನು ಸುರಕ್ಷಿತವಾಗಿ ಆಯಾ ರಾಜ್ಯಗಳಿಗೆ ತಲುಪಿಸುವಂತಹ ವ್ಯವಸ್ಥೆಯನ್ನು ತಹಶೀಲ್ದಾರ್ ಮಂಜುನಾಥ್ ಮಾಡಿದ್ದರು ಎಂದಿದ್ದಾರೆ.
ಸಾಂಕ್ರಾಮಿಕ ರೋಗಗಳು ಹಾಗೂ ಕೊರೊನಾ ಹರಡುತ್ತದೆ ಎಂಬ ಕಾರಣಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಗೋಹತ್ಯೆ ಮಾಡುತ್ತಿದ್ದನ್ನು ತಡೆದು ಶಿಸ್ತು ಕ್ರಮ ಕೈಗೊಂಡ ಕಾರಣಕ್ಕಾಗಿ ತಹಶೀಲ್ದಾರ್ ಅವರ ವರ್ಗಾವಣೆ ಷಡ್ಯಂತ್ರ ನಡೆದಿದೆ. ಕಂದಾಯ ಇಲಾಖೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಬಹಳ ಪ್ರಯತ್ನ ಮಾಡಿದ್ದು, ಜೊತೆಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಿರುಗಾಡುವ ಸಾವಿರಾರು ವಾಹನಗಳು ಹಾಗೂ ಜನರನ್ನು ನಿಯಂತ್ರಣ ಮಾಡಲು ಅಗತ್ಯ ಕ್ರಮವನ್ನು ವ್ಯವಸ್ಥಿತವಾಗಿ ಕೈಗೊಂಡಿದ್ದಾರೆ ಎಂದರು.
ಸಕಲೇಶಪುರ ತಾಲೂಕಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಎಲ್ಲಾ ವ್ಯವಸ್ಥೆಯನ್ನು ಸಹ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು ಆದರೂ ಸಹ ರಾಜಕೀಯ ದುರುದ್ದೇಶದಿಂದ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಡ ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಯಾವುದೇ ಕಾರಣಕ್ಕೂ ಕೋವಿಡ್-19 ಸಮಸ್ಯೆ ಮುಗಿಯುವವರೆಗೂ ವರ್ಗಾವಣೆ ಮಾಡಬಾರದೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಕೌಶಿಕ್, ಕಾರ್ತೀಕ್, ರಘು, ಶೇಖರ್ ಸೇರಿದಂತೆ ಇತರರಿದ್ದರು.