ಸಕಲೇಶಪುರ(ಹಾಸನ): ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಗುಲಗಳಲೆ ಹಾಗೂ ಹೊಸೂರು ಗ್ರಾಮ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪಘಾತವಾಗಿದೆ. ಸಕಲೇಶಪುರದ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಹಾಸನದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ. ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದ ವಾಹನ ರಸ್ತೆಯ ಇನ್ನೊಂದು ಭಾಗಕ್ಕೆ ದಿಢೀರನೆ ಬಂದಿದೆ. ಆಗ ತಕ್ಷಣವೇ ಎಚ್ಚೆತ್ತುಕೊಂಡ ಬಸ್ ಚಾಲಕ ಗುರು ಬಸ್ ಪಕ್ಕಕ್ಕೆ ಚಲಾಯಿಸಿದ ಪರಿಣಾಮ ಟ್ಯಾಂಕರ್ ಬಸ್ಗೆ ಉಜ್ಜಿಕೊಂಡು ಹೋಗಿ ರಸ್ತೆಯ ಮತ್ತೊಂದು ಭಾಗದಲ್ಲಿನ ಗುಂಡಿಗೆ ಬಿದ್ದಿದೆ.
ಬಸ್ನಲ್ಲಿ ಸುಮಾರು 35ಕ್ಕೂ ಹೆಚ್ಚಿನ ಪ್ರಯಾಣಿಕರಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿದೆ. ಸದ್ಯ ಆಂಬುಲೆನ್ಸ್ ಮುಖಾಂತರ ಗಾಯಾಳುಗಳನ್ನು ಹಾಸನದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಬಸ್ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು, ಆತನ ಸಮಯ ಪ್ರಜ್ಞೆಯಿಂದ ಸಂಭವನೀಯ ದೊಡ್ಡ ಅಪಘಾತ ತಪ್ಪಿದೆ. ಸದ್ಯ ಟ್ಯಾಂಕರ್ ಚಾಲಕ ವಿಜಯ್ ಕುಮಾರ್ ಎಂಬುವನನ್ನು ನಗರ ಠಾಣೆ ಪೋಲಿಸರು ಬಂಧಿಸಿ ದೂರು ದಾಖಲಿಸಿಕೊಂಡಿದ್ದಾರೆ.
ಹಾಸನ-ಸಕಲೇಶಪುರದ ನಡುವಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಪೂರ್ಣವಾಗಿ ಗುಂಡಿಗಳು ಬಿದ್ದಿದ್ದು, ವಾಹನ ಚಾಲಕರು ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.