ಹಾಸನ: ಹೆರಿಗೆ ನೋವು ಕಾಣಿಸಿಕೊಂಡು ಒದ್ದಾಡುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗಿದ್ದು, ಕೋವಿಡ್ ವರದಿ ನೀಡಲಿಲ್ಲ ಎಂಬ ಕಾರಣಕ್ಕೆ ದಾಖಲಾತಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಎಚ್.ಒ ಅವರು ಆಸ್ಪತ್ರೆಯ ನಿರ್ಲಕ್ಷ್ಯ ಎಂಬುದನ್ನು ತಳ್ಳಿ ಹಾಕಿದ್ದಾರೆ.
ಪ್ರಕರಣದ ಬೆನ್ನಲ್ಲೆ ಶಾಂತಿಗ್ರಾಮ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್, ಘಟನೆ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳಿಂದ ಮಾಹಿತಿ ಪಡೆದು ಬಳಿಕ ಮಾತನಾಡಿದ್ರು. ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಬಂದಾಗ ಕೋವಿಡ್ ಪರೀಕ್ಷಾ ವರದಿ ಕೇಳಿರುವುದು ಸತ್ಯ. ಆದ್ರೆ, ಆಸ್ಪತ್ರೆಗೆ ಬರುವ ಮುನ್ನವೇ ಆಟೋದಲ್ಲಿಯೇ ಹೆರಿಗೆ ಆಗಿದ್ದು, ಬಳಿಕ ಆಸ್ಪತ್ರೆ ಸಿಬ್ಬಂದಿ ತಕ್ಷಣ ಆಸ್ಪತ್ರೆಯ ಹೊರಗೆ ಬಂದು ಗರ್ಭಿಣಿಗೆ ಆರೈಕೆ ಮಾಡಿದ್ದಾರೆ. ಇದಾದ ನಂತರ ಆಕೆಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಆಕೆಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ತಾಯಿ ಮಗು ಇಬ್ಬರು ಚನ್ನಾಗಿದ್ದಾರೆ. ಆತಂಕಪಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.
ಕೋವಿಡ್ ನಿಯಮ ಒಂದು ಕಡೆ ಇರಲಿ ಸಾರ್. ಮಾನವೀಯತೆಯಿಂದಲಾದರೂ ಆಕೆಗೆ ಹೆರಿಗೆ ಮಾಡಿಸಲು ಸಿಬ್ಬಂದಿ ಮುಂದಾಗಬೇಕಿತ್ತು. ಆದ್ರೆ ,ಅವರು ಅದನ್ನು ಮಾಡದೇ ಅಮಾನವೀಯತೆಯಿಂದ ನಡೆದುಕೊಂಡಿದ್ದಾರೆ. ನಾನು ರಾತ್ರಿ 11 ಗಂಟೆಯ ಸಂದರ್ಭದಲ್ಲಿ ಆಕೆಯನ್ನು ಆಟೋದಲ್ಲಿ ಕರೆದುಕೊಂಡು ಆಸ್ಪತ್ರೆಗೆ ಬಂದೆ. ಅದ್ರೆ ಅವರು ಕೋವಿಡ್ ಪರೀಕ್ಷಾ ವರದಿ ಬೇಕೆಂದು ಕೇಳಿದ್ರು. ಆದ್ರೆ ಹೆರಿಗೆ ನೋವು ತುಂಬಾ ಇದೆ. ದಯಮಾಡಿ ಆಕೆಯನ್ನು ದಾಖಲಿಸಿ ಚಿಕಿತ್ಸೆ ನೀಡಿ ಎಂದು ಕೇಳಿಕೊಂಡರು ಅವರು ಮನಸ್ಸು ಕರಗದೇ ಕೋವಿಡ್ ಪರೀಕ್ಷೆ ವರದಿ ಬೇಕೆ ಬೇಕೆಂದು ಹಠ ಹಿಡಿದಿದ್ದರಿಂದ ಆ ಮಹಿಳೆ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ನನ್ನ ಆಟೋದಲ್ಲಿಯೇ ಗಂಡು ಮಗುವಿಗೆ ಜನ್ಮವಿತ್ತಳು ಎಂದು ಆಟೋ ಚಾಲಕ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ನಿಜಕ್ಕೂ ಈ ಪ್ರಕರಣ ಕರುಳು ಕಿತ್ತು ಬರುವಂತಿತ್ತು. ಪ್ರಸವದ ಕೊನೆ ಕ್ಷಣದಲ್ಲಿ ಸುತ್ತಮುತ್ತಲಿನ ಕೆಲವರು ರೋಗಿಗಳ ಪೋಷಕರು ಬಂದು ಆಕೆಗೆ ಬಟ್ಟೆಯ ಮೂಲಕ ರಕ್ಷಣೆ ನೀಡಿದ್ರು ಎಂದಿದ್ದಾರೆ.