ಗದಗ : ಸಿಡಿಲು ಬಡಿದು 10ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ರೆ, 20ಕ್ಕೂ ಅಧಿಕ ಗಾಯಗೊಂಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ನಡೆದಿದೆ.
ಗುಡುಗು, ಸಿಡಿಲು ಸಮೇತ ಭಾರಿ ಮಳೆಯಾಗಿದೆ. ಮಳೆ ಹಿನ್ನೆಲೆ ಮರದ ಕೆಳಗೆ ನಿಂತ ಪರಿಣಾಮ ಮರಕ್ಕೆ ಹಾಗೂ ಕುರಿಗಳಿಗೆ ಸಿಡಿಲು ಬಡಿದಿದೆ. ರಾಯಪ್ಪ ಪೂಜಾರಿ, ಅಜಿತ್ ಪೂಜಾರಿ ಎಂಬುವರಿಗೆ ಸೇರಿದ ಕುರಿಗಳು ಗಾಯಗೊಂಡಿವೆ. ಕುರಿಗಳ ಸಾವು ಕಂಡು ಕುರಿಗಾಹಿ ಕುಟುಂಬ ಕಣ್ಣೀರಿಡುತ್ತಿದೆ.
ಪ್ರಕೃತಿಯ ವಿಕೋಪದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡಿದ್ದು, ಹಾನಿಯಾದ ಕುರಿಗಳಿಗೆ ಸರ್ಕಾರ ಪರಿಹಾರ ನೀಡುವಂತೆ ಸ್ಥಳೀಯರು ಹಾಗೂ ಕುರಿಗಾಹಿ ಕುಟುಂಬ ಮನವಿ ಮಾಡಿದೆ.
ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಭೇಟಿ ಪರಿಶೀಲನೆ ನಡೆಸಿದರು. ರೋಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.