ಗದಗ : ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಒಸಿ/ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಹಾಗೂ ಜನರನ್ನು ಅದರತ್ತ ಪ್ರೇರೇಪಿಸುತ್ತಿದ್ದ ಮೂವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಗದಗ ಎಸ್ಪಿ ಯತೀಶ್ ಎನ್ ಆದೇಶ ಹೊರಡಿಸಿದ್ದಾರೆ.
ರೋಣ ತಾಲೂಕಿನ ಹಿರೇಹಾಳ ಗ್ರಾಮದ ಈರಣ್ಣ ಶಂಕರಪ್ಪ ಸೀಮಿಕೇರಿ, ಶಿವನಗೌಡ ವೀರನಗೌಡ ಪಾಟೀಲ್ ಹಾಗೂ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮುಸ್ತಾಕ್ ಜಿನ್ನಾಸಾಬ್ ದೊಡ್ಡಮನಿ ಗಡಿಪಾರಾದ ಮಟ್ಕಾ ಬುಕ್ಕಿಗಳಾಗಿದ್ದಾರೆ.
ಇವರು ಸಾರ್ವಜನಿಕ ಆಸ್ತಿ ಮತ್ತು ಜನರ ಜೀವಹಾನಿ ಮಾಡುವ ಕೃತ್ಯಗಳಲ್ಲಿ ತೊಡಗಿದ್ದಲ್ಲದೆ, ಕಾನೂನು ಬಾಹಿರ ಚಟುವಟಿಕೆ ಮುಂದುವರೆಸಿಕೊಂಡು ಬಂದ ಹಿನ್ನೆಲೆ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
![Three people deported from Gadag district](https://etvbharatimages.akamaized.net/etvbharat/prod-images/10749331_thumb.jpg)
ಗಡಿಪಾರಾದ ವ್ಯಕ್ತಿಗಳ ಪೈಕಿ, ಈರಣ್ಣ ಸೀಮಿಕೇರಿ ಮೇಲೆ 5 ಪ್ರಕರಣಗಳಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಈತನನ್ನು ರಾಯಚೂರು ಜಿಲ್ಲೆಯ ಸಿಂಧನೂರಿಗೆ ಗಡಿಪಾರು ಮಾಡಲಾಗಿದೆ. ಶಿವನಗೌಡ ಪಾಟೀಲ್ಗೂ 5 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಈತನನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಮುಸ್ತಾಕ್ ದೊಡ್ಡಮನಿಗೆ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಈತನನ್ನು ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ಗೆ ಗಡಿಪಾರು ಮಾಡಲಾಗಿದೆ. ಈ ಬಗೆಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಯಾರಾದರೂ ತೊಡಗಿಕೊಂಡರೆ ಅವರಿಗೂ ಕೂಡ, ಇದೇ ರೀತಿಯ ಶಿಕ್ಷೆ ಕಾದಿದೆ ಎಂದು ಎಸ್ಪಿ ಯತೀಶ್ ಎಚ್ಚರಿಕೆ ನೀಡಿದ್ದಾರೆ.