ಗದಗ : ಸೇಫ್ ಝೋನ್ನಲ್ಲಿದ್ದ ಜಿಲ್ಲೆಯಲ್ಲಿಯೂ ಸಹ ಕೊರೊನಾ ಪರಿಸ್ಥಿತಿ ಬಿಗಡಾಯಿಸಿದೆ. ಸಾವಿನ ಪ್ರಮಾಣದ ನಿಯಂತ್ರಣದಲ್ಲಿ ಈವರೆಗೂ ಸಮರೋಪಾದಿಯಲ್ಲಿ ಕೆಲಸ ಮಾಡಿದರೂ ಇಂದು ವೆಂಟಿಲೇಟರ್ ಕೊರತೆಯಾಗಿ ಮೂವರು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಕೊರತೆ ಇಲ್ಲ, ಕೊರೊನಾ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ ಅಂತ ಜಿಲ್ಲಾಡಳಿತ ಹೇಳ್ತಿದೆ.
ಆದ್ರೆ, ಈಗ ಬೆಡ್, ಆಕ್ಸಿಜನ್, ವೆಂಟಿಲೇಟರ್ ಕೊರತೆ ಇರುವುದು ತಿಳಿದು ಬಂದಿದೆ. ಕಾರಣ, ಇಂದು ಒಂದೇ ದಿನ ಮೂವರು ಜನ ಸೋಂಕಿತರು ಸಾವನ್ನಪ್ಪಿರುವುದು.
ನಿನ್ನೆ ಮುಂಡರಗಿ ಆಸ್ಪತ್ರೆಯಲ್ಲಿ ನಾಲ್ಕು ಜನರಿಗೆ ವೆಂಟಿಲೇಟರ್ ವ್ಯವಸ್ಥೆ ಬೇಕಿತ್ತು. ಅವರ ಪರಿಸ್ಥಿತಿ ಗಮನಿಸಿದ ವೈದ್ಯರು ವೆಂಟಿಲೇಟರ್, ಬೆಡ್ಗಾಗಿ ಜಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಆದರೆ, ತಕ್ಷಣದಲ್ಲಿ ಅವರಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಿರಲಿಲ್ಲ.
ಎರಡು ದಿನಗಳು ಕಳೆದರೂ ಸಿಬ್ಬಂದಿ ಅವರ ಬಗ್ಗೆ ಯೋಚನೆ ಮಾಡಲಿಲ್ಲಾ. ಹಾಗಾಗಿ ಇಂದು ಅದೇ ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗದಗ ಡಿಹೆಚ್ಒ ಡಾ. ಸತೀಶ್ ಬಸರಗಿಡದ, ನಮ್ಮ ಸಿಬ್ಬಂದಿ ಅವರಿಗೆ ಜಿಮ್ಸ್ ಆಸ್ಪತ್ರೆಗೆ ಕರೆತರಲು ಎಲ್ಲಾ ಸಿದ್ಧತೆ ಮಾಡಿದ್ದರು.
ಆದರೆ, ಅಷ್ಟರೊಳಗೆ ಈ ದುರ್ಘಟನೆ ನಡೆದು ಹೋಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಗಮನ ಹರಿಸಲಾಗುವುದು ಅಂತ ಸಮಜಾಯಿಷಿ ನೀಡಿದ್ದಾರೆ.
ಗದಗನಲ್ಲಿ ಕೇವಲ 48 ವೆಂಟಿಲೇಟರ್ ಬೆಡ್‌ಗಳಿವೆ. ಆದ್ರೆ, ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಇಲ್ಲ. ಒಂದು ವೇಳೆ ಅಲ್ಲಿನ ರೋಗಿಗಳಿಗೆ ತೀವ್ರ ಸ್ವರೂಪದ ತೊಂದರೆಯಾದರೆ ಅಂತರವನ್ನು ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲು ಸೂಚಿಸಲಾಗಿದೆ.
ಆದರೆ, ಈ ಸೂಚನೆ ಬೆನ್ನಲ್ಲೆ ಇಂತಹ ದುರ್ಘಟನೆ ನಡೆದು ಹೋಗಿದ್ದು, ಇದಕ್ಕೆ ಯಾರು ಹೊಣೆ ಅನ್ನೋದನ್ನ ಜಿಲ್ಲಾಡಳಿತವೇ ಹೇಳಬೇಕಾಗಿದೆ.
ಜಿಲ್ಲೆಯನ್ನು ಕೊರೊನಾ ನಿಯಂತ್ರಣ ವಿಷಯದಲ್ಲಿ ಮೊದಲನೇ ಸ್ಥಾನದಲ್ಲಿ ತರಬೇಕು ಅನ್ನೋದು ಸಚಿವ ಸಿ.ಸಿ. ಪಾಟೀಲ್ ಅವರ ಗುರಿ. ಇಂತಹ ಘಟನೆ ಅಧಿಕಾರಿಗಳ ಬೇಜಾವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಅಲ್ಲದೆ, ಜಿಮ್ಸ್ ಆಸ್ಪತ್ರೆಯಲ್ಲಿ ಬೆಡ್ಗಳು ಬರ್ತಿಯಾಗಿರೋದ್ರಿಂದ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚುವರಿ 30 ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಆದರೆ, ಅಲ್ಲಿ ಇನ್ನೂ ವೈದ್ಯಕೀಯ ಸಿಬ್ಬಂದಿ ಮತ್ತು ಔಷಧಿಗಳ ವ್ಯವಸ್ಥೆ ಮಾಡಬೇಕಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.