ಗದಗ: ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಹಲವೆಡೆ ಬೆಳೆ ನಾಶವಾಗಿ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಉಂಟಾಗಿದೆ.
ಕೊರೊನಾ ಹಾವಳಿಯಿಂದ ತಾವು ಬೆಳೆದ ಬೆಳೆ ಮಾರಾಟವಾಗದೆ ಕಂಗೆಟ್ಟಿದ್ದ ರೈತರು ಅಕಾಲಿಕವಾಗಿ ಸುರಿದ ಗಾಳಿ ಸಹಿತ ಮಳೆಯಿಂದ ಬೀದಿಗೆ ಬಂದಿದ್ದಾರೆ. ನಿನ್ನೆ ಸುರಿದ ಅಕಾಲಿಕ ಮಳೆಗೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಉಣಚಗೇರಿ ಗ್ರಾಮದಲ್ಲಿ ಮಳೆಗಾಳಿಗೆ ಬಾಳೆ ಬೆಳೆ ನಾಶವಾಗಿದೆ.
ರೈತ ಸೋಮಪ್ಪ ರಾಠೋಡ ಎಂಬುವರ ಎರಡು ಎಕರೆ ಬಾಳೆ ತೋಟ ನಿನ್ನೆ ರಾತ್ರಿ ಗಾಳಿ ಮಳೆಗೆ ಸಂಪೂರ್ಣವಾಗಿ ನೆಲಕಚ್ಚಿದೆ. ಕೊರೊನಾ ವೈರಸ್ ಅಟ್ಟಹಾಸಕ್ಕೆ ನಲುಗಿದ ರೈತನಿಗೆ ಮಳೆರಾಯ ಆಘಾತ ನೀಡಿದ್ದಾನೆ. ಇದರಿಂದ ಲಕ್ಷಾಂತರ ರೂ. ಮೌಲ್ಯದ ಬಾಳೆ ಈಗ ನೆಲಕ್ಕೆ ಉರುಳಿ ಬಿದ್ದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬಾಳೆ ನಾಶವಾಗಿದ್ದು, ಬೆಳೆ ನಷ್ಟ ಅನುಭಿವಿಸಿರುವ ರೈತ ತಮಗೆ ಸೂಕ್ತ ಪರಿಹಾರ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾನೆ.