ಗದಗ: 'ಪೆಟ್ರೋಲ್, ಡಿಸೇಲ್ ಹಾಗು ಗ್ಯಾಸ್ ಬೆಲೆ ಹೆಚ್ಚಾಯ್ತು ಅಂತ ಕಾಂಗ್ರೆಸ್‌ನವರು ಅಬ್ಬರಿಸಿ ಬೊಬ್ಬರಿಯುತ್ತಾರಲ್ಲಾ, ಸ್ವಾತಂತ್ರ್ಯ ಬಂದಾಗಿನಿಂದಲೂ ಪೆಟ್ರೋಲ್, ಡೀಸೆಲ್, ಗ್ಯಾಸ್ ಯಾವುದೇ ವಸ್ತುಗಳ ಬೆಲೆ ಜಾಸ್ತಿ ಆಗಿಲ್ವಾ?' ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಅನ್ನು ಪ್ರಶ್ನಿಸಿದ್ದಾರೆ.
ಗದಗನ ವಿಠಲಾರೂಢ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಓಬಿಸಿ ಪದಾಧಿಕಾರಿಗಳ ಕಾರ್ಯಕಾರಿಣಿ ಹಾಗೂ ವಿಶೇಷ ಸಭೆ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
'ಇಂಧನ ಬೆಲೆಯಲ್ಲಿ ಹೆಚ್ಚು, ಕಮ್ಮಿ ಆಗೋದು ನಿಯಮ. ಅದನ್ನು ನಿಯಂತ್ರಣ ಮಾಡೋದಕ್ಕೆ ಪ್ರಯತ್ನ ಮಾಡ್ತೀವಿ. ಬೆಲೆ ಏರಿಕೆ ವಿಚಾರ ಒಪ್ಪಿಕೊಳ್ಳುತ್ತೇನೆ. ಬೇರೆ ಏನೂ ಒಳ್ಳೆದು ಆಗಿಲ್ವಾ? ಯಾವ್ದು ಒಳ್ಳೆಯದಿದೆ ಅದರ ಸುದ್ದಿ ಕಾಂಗ್ರೆಸ್ ಎತ್ತಲ್ಲ' ಎಂದು ಹರಿಹಾಯ್ದರು.
ಕಾಂಗ್ರೆಸ್‌ನವರು ಪೆಟ್ರೋಲ್, ಡೀಸೆಲ್ ಹಿಡ್ಕೊಂಡು ಅಲ್ಲಾಡ್ತಿದಾರೆ. ಇನ್ನೊಂದ್ ನಾಲ್ಕು ದಿನ ಅಲ್ಲಾಡ್ಲಿ. ಮುಂದಿನ ದಿನದಲ್ಲಿ ಪೆಟ್ರೋಲ್ ಡೀಸೆಲ್ ದರ ಕಡಿಮೆ ಆಗುತ್ತೆ ಎಂದು ಹೇಳಿದರು.
ಬೆಂಗಳೂರು ಉಸ್ತುವಾರಿಗೆ ಸಚಿವ ವಿ.ಸೋಮಣ್ಣ ಹಾಗೂ ಆರ್.ಅಶೋಕ್ ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, 'ಪೈಪೋಟಿ ಯಾಕೆ ಇರ್ಬಾದ್ರು? ರಾಜಕಾರಣದಲ್ಲಿ ಸಣ್ಣಪುಟ್ಟದು ಇರುತ್ತೆ. ಏನೂ ಇಲ್ಲ ಅಂತಾ ನಾನು ಹೇಳೋಕಾಗಲ್ಲ, ಸಮಸ್ಯೆ ಇದ್ರೆ ಬಗೆಹರಿಸಿಕೊಳ್ಳುತ್ತೇವೆ. ಭಿನ್ನಾಭಿಪ್ರಾಯ ಇದ್ರೆ ದೊಡ್ಡವರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುತ್ತೇವೆ' ಎಂದು ತಿಳಿಸಿದರು.
ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಬಗ್ಗೆ ಕಾಂಗ್ರೆಸ್ ಬಗ್ಗೆ ವಾಗ್ದಾಳಿ ನಡೆಸುತ್ತಾ, 'ಗೆಲುವು ನಮ್ಮದೇ ಎಂಬ ಕಾಂಗ್ರೆಸ್‌ನವರ ಹೇಳಿಕೆ ಭ್ರಮೆ ಅಷ್ಟೇ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಇದ್ದಾಗ ಹೀಗೆ ಹೇಳ್ತಿದ್ರು. ಈಗ ಸರ್ಕಾರ ನಮ್ದೇ ಇದೆ, ಮುಂದೆಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆದ್ರೆ, ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೆಗೆದು ಬಿದ್ರು' ಅಂತ ಕಟು ಟೀಕೆ ಮಾಡಿದರು.