ಗದಗ : ಅದು ಕೇವಲ ರೈಲು ನಿಲ್ದಾಣವಷ್ಟೇ ಅಲ್ಲಾ. ಇದೀಗ ಪ್ರವಾಸಿ ಕೇಂದ್ರವಾಗಿ ಪರಿವರ್ತನೆಯಾಗಿದೆ. ಕಪ್ಪತಗುಡ್ಡ, ಪ್ರಾಣಿ ಸಂಗ್ರಹಾಲಯದಂತೆ ಇದೂ ಸಹ ಈಗ ಜನರನ್ನು ಆಕರ್ಷಿಸುತ್ತಿದೆ. ಕೇವಲ ಪ್ರಯಾಣಕ್ಕೆ ಮಾತ್ರ ಸೀಮಿತವಾಗದೆ, ನಿಲ್ದಾಣದಲ್ಲಿ ರೈಲಿಗಾಗಿ ಕಾಯುವ ಪ್ರಯಾಣಿಕರ ಮನಸ್ಸಿಗೆ ಮುದ ನೀಡುತ್ತಿದೆ.
ನಗರದ ರೈಲು ನಿಲ್ದಾಣಕ್ಕೆ ಹೈಟೆಕ್ ಟಚ್ ನೀಡಲಾಗಿದೆ. ಗದಗನ ಪ್ರಮುಖ ಸ್ಥಳಗಳಲ್ಲಿ ಈ ರೈಲು ನಿಲ್ದಾಣವನ್ನೂ ಸಹ ಆಕರ್ಷಣೆಯೇ ಕೇಂದ್ರವನ್ನಾಗಿ ಮಾಡಲಾಗಿದೆ. ಇಷ್ಟು ದಿನ ಕೇವಲ ಕಪ್ಪತಗುಡ್ಡದ ಸೌಂದರ್ಯದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದ ಜನ ಈಗ ಈ ನಿಲ್ದಾಣದ ಕುರಿತಂತೆಯೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ರೈಲ್ವೆ ನಿಲ್ದಾಣದ ಸುತ್ತಲೂ ಬಣ್ಣ ಬಣ್ಣದ ಅಲಂಕಾರ ಮಾಡಲಾಗಿದೆ. ಒಂದು ಫ್ಲಾಟ್ ಫಾರ್ಮ್ ದಿಂದ ಇನ್ನೊಂದು ಫ್ಲಾಟ್ ಫಾರ್ಮ್ ಗೆ ಹೋಗಲು ಮಾಡಿರುವ ಸೇತುವೆಯ ಮೆಟ್ಟಿಲುಗಳಿಗೆ 3ಡಿ ಎಫೆಕ್ಟ್ ಮೂಲಕ ಹುಲಿಯ ಚಿತ್ರದಿಂದ ಕಂಗೊಳಿಸುವಂತೆ ಮಾಡಲಾಗಿದೆ.
ಮುಖ್ಯವಾಗಿ ಚಿಕ್ಕದೊಂದು ಮಾದರಿ ರೈಲು ನಿಲ್ದಾಣದ ವಸ್ತು ಸಂಗ್ರಹಾಲಯ ತೆರೆಯಲಾಗಿದೆ. ಬಹುತೇಕ ನಿಲ್ದಾಣದ ಸುತ್ತಲೂ ಮರಗಿಡಗಳಿಂದ ಕಂಗೊಳಿಸಲಾಗಿದೆ. ಪಕ್ಕದಲ್ಲೇ ಮಿನಿ ಗಾರ್ಡನ್ ಮಾಡಲಾಗಿದ್ದು, ಮರ ಮತ್ತು ಕಲ್ಲಿನ ಮಂಚಗಳನ್ನು ಇಡಲಾಗಿದೆ. ಗಾರ್ಡನ್ ಒಳಗಡೆ ವಿವಿಧ ರೀತಿಯ ಕಲರ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಗಾರ್ಡನ್ ನಲ್ಲಿ ಗದಗನವರಾದ ಸಂಗೀತ ದಿಗ್ಗಜ ಪಂಡಿತ ಭೀಮಸೇನ್ ಜೋಶಿಯವರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಓದಿ : ಮಹಾತ್ಮನಿಗೊಂದು ಗುಡಿ.. ಅಹಿಂಸಾ ಮೂರ್ತಿಯ ಆದರ್ಶವಾಗಿಸಿಕೊಂಡ ಗ್ರಾಮ..
ಮುಖ್ಯವಾಗಿ ಈ ರೈಲು ನಿಲ್ದಾಣವನ್ನು ಪರಿಸರ ಸ್ನೇಹಿ ನಿಲ್ದಾಣ ಅಂದರೆ ತಪ್ಪಾಗುವುದಿಲ್ಲ. ಈ ರೈಲು ನಿಲ್ದಾಣಕ್ಕೆ ಬೇಕಾಗುವ ವಿದ್ಯುತ್ ಅನ್ನು ಶೇ.70 ರಷ್ಟು ಸೋಲಾರ್ ಮೂಲಕ ಉತ್ಪಾದನೆ ಮಾಡಿ ಬಳಸಿಕೊಳ್ಳಲಾಗ್ತಿದೆ. ನಿಲ್ದಾಣದ ಮೇಲ್ಚಾವಣಿಯಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಿದ್ದು, ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಯಾಗಿದೆ. ಜೊತೆಗೆ ರೈಲು ನಿಲ್ದಾಣದಿಂದ ಗುಂತ್ಕಲ್ ವರೆಗೆ ವಿದ್ಯುತ್ ಚಾಲಿತ ರೈಲು ಓಡಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.