ಗದಗ: ಕಳೆದ 15 ದಿನಗಳಿಂದ ಸುರಿಯುತ್ತಿರೋ ಮಳೆ ರೋಣ ತಾಲೂಕಿನ ಮಾರನಬಸರಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಆಸೆಗೆ ತಣ್ಣೀರೆರಚಿದೆ.
ರೈತರು ಸಾಲ ಸೋಲ ಮಾಡಿ ಈರುಳ್ಳಿ ಮತ್ತು ಶೇಂಗಾ ಬೆಳೆದಿದ್ರು. ಇನ್ನೇನು ಒಂದು ತಿಂಗಳಲ್ಲಿ ಬೆಳೆ ಅವರ ಕೈಗೆ ಬಂದು ಲಕ್ಷಾಂತರ ರೂಪಾಯಿ ಲಾಭ ಗಳಿಸ್ತಿದ್ರು. ಆದ್ರೆ ಮಳೆಯಿಂದಾಗಿ ರೈತರ ಹೊಲಗಳ ಬದುಗಳೆಲ್ಲವೂ ಒಡೆದು, ನೀರು ಹೊಲಗಳಿಗೆ ನುಗ್ಗಿದೆ. ಹೀಗಾಗಿ ಕಷ್ಟಪಟ್ಟು ಬೆಳೆದಿದ್ದ ಈರುಳ್ಳಿ, ಶೇಂಗಾ ನೀರುಪಾಲಾಗಿವೆ.
ಇನ್ನೂ ಕೆಲವೆಡೆ ಮಳೆ ನೀರಿನಲ್ಲಿಯೇ ಬೆಳೆಗಳಿರುವ ಪರಿಣಾಮ ಹಳದಿ ರೋಗ ಕಾಣಿಸಿಕೊಂಡಿದೆ. ನಮ್ಮ ಪರಿಸ್ಥಿತಿ ಹೀಗಾದ್ರೆ ನಮ್ಮ ಜೀವನ ನಡೆಯೋದು ಹೇಗೆ ಅಂತ ಪ್ರಶ್ನೆ ಮಾಡ್ತಿದ್ದಾರೆ ರೈತರು. ನಮ್ಮ ಸಹಾಯಕ್ಕೆ ಸರ್ಕಾರ ನಿಲ್ಲಬೇಕು ಅಂತ ಅಂಗಲಾಚುತ್ತಿದ್ದಾರೆ.
ತಾಲೂಕಿನ ಮಾರನಬಸರಿ, ಕಳಕಾಪುರ, ನಿಡಗುಂದಿ, ಜಕ್ಕಲಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ರೈತರು ಸಾವಿರಾರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ನಿರಂತರ ಮಳೆಗೆ ಹೊಲಗಳಲ್ಲಿ ನೀರು ನಿಂತು ಬೆಳೆಗಳೆಲ್ಲಾ ಹಳದಿ, ಸುಳಿಯಂಥ ರೋಗಕ್ಕೆ ತುತ್ತಾಗುತ್ತಿವೆ. ಅಲ್ಲದೇ ಈ ಬಾರಿ ಈರುಳ್ಳಿ ಬೆಳೆಗೆ ಬಂಪರ್ ಬೆಲೆ ಇದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಹೀಗೆ ಪದೇ ಪದೇ ಆಗುತ್ತಿರುವ ಅವಾಂತರಗಳಿಗೆ ರೈತ ವರ್ಗ ತನ್ನ ಕಾಯಕ ಬಿಟ್ಟು ಸರ್ಕಾರಿ ಕಚೇರಿಗಳಿಗೆ ಅಲೆದಾಡೋ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಯ ತಪ್ಪಿ ಬರೋ ಮಳೆರಾಯ, ಭೀಕರ ಪ್ರವಾಹ, ಕೊರೊನಾ ಸಂಕಷ್ಟ ಇವೆಲ್ಲದರ ಹೊಡೆತಕ್ಕೆ ಕೃಷಿಯಲ್ಲಿ ಖುಷಿ ಕಾಣಬೇಕಿದ್ದ ಗ್ರಾಮೀಣ ಭಾಗದ ಕುಟುಂಬಗಳು ಕಣ್ಣೀರು ಸುರಿಸುತ್ತಿವೆ. ಹೀಗಾಗಿ ಸರ್ಕಾರ ತಕ್ಷಣ ಸದ್ಯಕ್ಕೆ ಮಳೆಯಿಂದ ಹಾಳಾದ ಬೆಳೆ ಸಮೀಕ್ಷೆ ಮಾಡಿ ತುರ್ತಾಗಿ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರು ಒತ್ತಾಯಿಸುತ್ತಿದ್ದಾರೆ.
ಅದಾವುದೇ ಪ್ರಕೃತಿ ವಿಕೋಪಗಳಾದ್ರೂ ಸರ್ಕಾರ ಕೋಟಿಗಟ್ಟಲೇ ಅನುದಾನ ಅಂತ ಜಿಲ್ಲೆಗಳಿಗೆ ನೀಡುತ್ತೆ. ಜಿಲ್ಲಾಡಳಿತ ಮಾನವೀಯತೆ ದೃಷ್ಟಿಯಿಂದ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕಿದೆ.