ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪದೇಪದೆ ಭೂ ಕುಸಿತವಾಗುತ್ತಿರುವ ಪ್ರದೇಶಕ್ಕೆ ಬೆಂಗಳೂರಿನ ಹಿರಿಯ ವಿಜ್ಞಾನಿ ಹೆಚ್‌ಎಸ್‌ಎಂ ಪ್ರಕಾಶ್ ನೇತೃತ್ವದ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನರಗುಂದ ಪಟ್ಟಣದ ಹಗೇದಕಟ್ಟಿ ಓಣಿ, ಕಸಬಾ ಓಣಿ, ದೇಸಾಯಿ ಬಾವಿ ಪ್ರದೇಶದಲ್ಲಿ ಪದೇಪದೆ ಭೂ ಕುಸಿತ ಸಂಭವಿಸುತ್ತಿರುವುದರಿಂದ ಜನರು ಭಯ ಭೀತರಾಗಿದ್ದರು. ಹೀಗಾಗಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್ ವಿಜ್ಞಾನಿಗಳ ವಿಶೇಷ ತಂಡವನ್ನು ಪರಿಶೀಲನೆಗೆ ಆಹ್ವಾನಿಸಿದ್ದರು. ಈ ಹಿನ್ನೆಲೆ ವಿಜ್ಞಾನಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.
ಭೂ ಕುಸಿತ ಸಂಭವಿಸುತ್ತಿರುವ ಪ್ರದೇಶದ ನೀರು, ಕಲ್ಲು, ಮಣ್ಣನ್ನು ಸಂಗ್ರಹಿಸಿ ವಿಜ್ಞಾನಿಗಳು ಪ್ರಾಯೋಗಿಕ ಪರೀಕ್ಷೆ ನಡೆಸಿದ್ದಾರೆ. ಶೀಘ್ರದಲ್ಲಿ ವರದಿ ನೀಡಲಿದ್ದಾರೆ. ಆ ವರದಿಯನ್ನು ಸಿಎಂ ಯಡಿಯೂರಪ್ಪ ಅವರ ಮುಂದಿಟ್ಟು, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಸಿ ಸಿ ಪಾಟೀಲ್ ತಿಳಿಸಿದ್ದಾರೆ.
ಆದರೆ, ಎರಡು ದಿನಗಳ ಕಾಲ ಪರಿಶೀಲನೆ ನಡೆಸಬೇಕಾಗಿದ್ದ ವಿಜ್ಞಾನಿಗಳು, ಕಾಟಾಚಾರಕ್ಕೆ ಪರಿಶೀಲನೆ ನಡೆಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಭೂ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ.