ಹುಬ್ಬಳ್ಳಿ : ಹೆಬ್ಬಳ್ಳಿ ಜಿಪಂ ಸದಸ್ಯ ಯೋಗೇಶ್‌ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಸೋಮಲಿಂಗ ನ್ಯಾಮಗೌಡ ಅವರ ವಿಚಾರಣೆ ಇಂದು ಮತ್ತೆ ಮುಂದುವರೆದಿದೆ.
ಸೋಮಲಿಂಗ ನ್ಯಾಮಗೌಡ, ವಿನಯ ಕುಲಕರ್ಣಿ ಸಚಿವರಿದ್ದ ವೇಳೆ ಆಪ್ತ ಕಾರ್ಯದರ್ಶಿಯಾಗಿದ್ದರು. ಸೋಮಲಿಂಗ ನ್ಯಾಮಗೌಡ ಅವರನ್ನು ಕಳೆದ ಮೂರು ದಿನಗಳಿಂದ ಸಿಬಿಐ ವಿಚಾರಣೆ ನಡೆಸುತ್ತಿದೆ. ನಿನ್ನೆ ವಿನಯ ಕುಲಕರ್ಣಿ ಹಾಗೂ ಸೋಮಲಿಂಗ ಇಬ್ಬರನ್ನೂ ಮುಖಾಮುಖಿ ವಿಚಾರಣೆ ಮಾಡಿದ್ದ ಸಿಬಿಐ ಅಧಿಕಾರಿಗಳು, ಇಂದು ಮತ್ತೆ ವಿಚಾರಣೆಗಾಗಿ ಸಿಎಆರ್ ಮೈದಾನಕ್ಕೆ ಕರೆದುಕೊಂಡು ಬಂದಿದ್ದಾರೆ.
ಸಾಕ್ಷ್ಯ ನಾಶಪಡಿಸಿ ಪ್ರಕರಣದ ದಿಕ್ಕು ತಪ್ಪಿಸಲು ದೊಡ್ಡ ಮಟ್ಟದ ಹಣ ನೀಡಿರುವ ಆರೋಪ ಕೇಳಿ ಬಂದಿದೆ. ವಿಚಾರಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ, ಸೋಮಲಿಂಗ ನ್ಯಾಮಗೌಡ ಮತ್ತು ವಿನಯ ಕುಲಕರ್ಣಿಯನ್ನು ಎದುರು ಬದುರು ಕೂರಿಸಿ ಸಿಸಿಬಿ ವಿಚಾರಣೆ ಮುಂದುವರೆಸಲಿದೆ.
ಹಣ ಯಾರಿಗೆ ಸಂದಾಯವಾಗಿದೆ, ಯಾಕೆ ನೀಡಲಾಗಿತ್ತು ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಲಿದ್ದಾರೆ. ಇದರಿಂದ, ವಿನಯ್ ಕುಲಕರ್ಣಿ ದೊಡ್ಡ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ.