ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಕಾರ್ಯಕರ್ತ ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಸಿಬಿಐ ತಂಡ ಆಗಮಿಸಿ ಮಾಹಿತಿ ಕಲೆ ಹಾಕಿದೆ.
ಸಿಬಿಐ ಅಧಿಕಾರಿಗಳು ಯೋಗೇಶ್ ಗೌಡ ಸಹೋದರ ಗುರುನಾಥ ಗೌಡ ಹಾಗೂ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದುಕೊಂಡರು. ಧಾರವಾಡ ತಾಲೂಕಿನ ಗೋವನಕೊಪ್ಪದಲ್ಲಿರುವ ಗುರುನಾಥಗೌಡ ತೋಟದ ಮನೆಯಲ್ಲಿ ಸಿಬಿಐ ತಂಡ ಮಾಹಿತಿ ಕಲೆ ಹಾಕಿದರು.
ಘಟನೆಯಲ್ಲಿ ಪ್ರಭಾವಿಗಳ ಕೈವಾಡವಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. 3 ದಿನಗಳ ಹಿಂದೆ ಆರೋಪಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿತ್ತು. ಇಂದು ಸಿಬಿಐ ತಂಡ ವಿಚಾರಣೆಗೆ ಮುಂದಾಗಿದೆ.
ಯೋಗೇಶ್ ಗೌಡ ಕುಟುಂಬಸ್ಥರಿಂದ ಮಾಹಿತಿ ಪಡೆದ ಸಿಬಿಐ ಅಧಿಕಾರಿಗಳು, ಯೋಗೇಶ್ ಗೌಡ ಪತ್ನಿ ಮನೆಗೆ ಭೇಟಿ ನೀಡಿದ್ದು, ಅವರು ಮನೆಯಲ್ಲಿಲ್ಲದ ಕಾರಣ ವಾಪಸ್ಸಾಗಿದ್ದಾರೆ. ಜೊತೆಗೆ ತಾಲೂಕಿನ ಗೋವನಕೊಪ್ಪದಲ್ಲಿರುವ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಅವರ ಮನೆಗೂ ಸಿಬಿಐ ತಂಡ ಭೇಟಿ ನೀಡಿತ್ತು. ಆದ್ರೆ, ಮಲ್ಲಮ್ಮ ಮನೆಯಲ್ಲಿ ಇಲ್ಲದ ಕಾರಣ ವಾಪಸ್ಸಾದರು.