ಹುಬ್ಬಳ್ಳಿ: ಮೊದಲು ನಾವು ನಮ್ಮ ಮಾತೃಭಾಷೆಗೆ ಆದ್ಯತೆ ಕೊಡಬೇಕು, ಆಮೇಲೆ ಬೇರೆ ಭಾಷೆಗಳ ಬಗ್ಗೆ ವಿಚಾರ ಮಾಡಬೇಕೆಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ನಗರದಲ್ಲಿಂದು ಆಯೋಜಿಸಲಾಗಿದ್ದ ದೇಶಪಾಂಡೆ ಸ್ಕಿಲ್ಲಿಂಗ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಅವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ವಿದ್ಯಾರ್ಥಿನಿಯೊಬ್ಬಳು 'ಗುಡ್ ಮಾರ್ನಿಂಗ್ ಸರ್...' ಎಂದಾಗ ನಾವು ಯಾರ ಜೊತೆಯಾದರೂ ಮಾತನಾಡುವ ವೇಳೆ ನಮಸ್ಕಾರ ಮಾಡಬೇಕು. ಅದು ಭಾರತೀಯ ಪರಂಪರೆ ಹಾಗೂ ನಮ್ಮ ಸಂಸ್ಕಾರ ಎಂದು ತಿಳಿ ಹೇಳಿದರು. ನಮ್ಮ ಭಾಷೆ ಯಾವುದೇ ಆಗಿರಲಿ, ನಾವು ಮೊದಲು ನಮಸ್ಕಾರ ಎಂದೇ ಮಾತು ಪ್ರಾರಂಭಿಸಬೇಕು. ವಿದ್ಯೆಗೆ ವಿನಯವೇ ಭೂಷಣ ಎಂದು ಹೇಳಿದರು.
ಮಕ್ಕಳು ಭವ್ಯ ಭಾರತದ ಭದ್ರ ಬುನಾದಿಗಳಾಗಿದ್ದಾರೆ. ಜೊತೆಗೆ ಸಂಸ್ಕಾರ, ಸಂಸ್ಕೃತಿಯ ಕುಡಿಗಳು. ಆದ್ದರಿಂದ ಮಕ್ಕಳಲ್ಲಿ ನಾವು ಉತ್ತಮ ಸಂಸ್ಕೃತಿ ಪರಿಪಾಠವನ್ನು ಕಲಿಸಬೇಕಾಗುತ್ತದೆ. ರಾಜ್ಯ ಹಾಗೂ ಪ್ರಾಂತ್ಯಕ್ಕೆ ಅನುಗುಣವಾಗಿ ಭಾಷೆ ಬದಲಾಗಬಹುದು. ಆದರೇ ನಮ್ಮ ದೇಶದ ಸಂಸ್ಕೃತಿ ಮಾತ್ರ ನಮಸ್ಕಾರದಿಂದಲೇ ಪ್ರಾರಂಭವಾಗಬೇಕು ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ ಶೆಟ್ಟರ್, ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಹಾಗು ಅರವಿಂದ ಬೆಲ್ಲದ ಉಪಸ್ಥಿತರಿದ್ದರು.