ಹುಬ್ಬಳ್ಳಿ(ಧಾರವಾಡ) : ವಾಣಿಜ್ಯನಗರಿ ಹುಬ್ಬಳ್ಳಿ ನವನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದೆ. ವಾರದೊಳಗೆ ನಾಲ್ಕೈದು ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಇದರಿಂದ ವ್ಯಾಪಾರಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆ ಎಂಬ ಖ್ಯಾತಿ ಹೊಂದಿರುವ ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯೀಗ ಕಳ್ಳರ ಹಾವಳಿಗೆ ನಲುಗುತ್ತಿದೆ.
ಪದೇಪದೆ ಕಳವು ಪ್ರಕರಣಗಳು ವರದಿಯಾಗುತ್ತಿವೆ. ಕಷ್ಟಪಟ್ಟು ದುಡಿದ ಹಣ, ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಕಳ್ಳರ ಪಾಲಾಗುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: 'ಸಂವಿಧಾನ, ಕೋರ್ಟ್ ಏನು ಹೇಳುತ್ತದೋ ಅದನ್ನು ಎಲ್ಲಾ ಧರ್ಮದವರು ಪಾಲಿಸಬೇಕು'
ಕಳೆದ ಗುರುವಾರ ತಡರಾತ್ರಿ ಎಪಿಎಂಸಿಯ ಎರಡು ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಹರೇಕೃಷ್ಣ ಅಂಗಡಿಯ ಪೆಟ್ಟಿಗೆಯಲ್ಲಿದ್ದ ಸಾವಿರಾರು ರೂ.ಗಳನ್ನು ಕಳ್ಳರು ಕದ್ದಿದ್ದಾರೆ. ಇದೇ ವೇಳೆ ಇನ್ನೂ ಎರಡು ಅಂಗಡಿಗಳಲ್ಲಿ ಕಳವು ನಡೆದಿದೆ. ಈ ಹಿನ್ನೆಲೆ, ಎಪಿಎಂಸಿ ವ್ಯಾಪಾರಸ್ಥರೊಂದಿಗೆ ಎಪಿಎಂಸಿ-ನವನಗರ ಠಾಣೆ ಇನ್‌ಸ್ಪೆಕ್ಟರ್ ಸಭೆ ನಡೆಸಿ ಕಳವು ಪ್ರಕರಣಗಳ ಕುರಿತು ಚರ್ಚಿಸಿದ್ದಾರೆ.
ಆ ವೇಳೆ ಮಾರುಕಟ್ಟೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ವ್ಯಾಪಾರಸ್ಥರು ಮನವಿ ಮಾಡಿದ್ದರು. ಕಳ್ಳರನ್ನು ಹಿಡಿದೇ ಹಿಡಿಯುತ್ತೇವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುತ್ತೇವೆಂದು ಪೊಲೀಸ್ ಆಯುಕ್ತರು ಭರವಸೆ ನೀಡಿದ್ದಾರೆ.