ಹುಬ್ಬಳ್ಳಿ: ಸ್ಪೀಕರ್ ಅವರ ನಡೆ ಅತ್ಯಂತ ದುರ್ದೈವಕರವಾಗಿದ್ದು,14 ಅತೃಪ್ತರ ರಾಜೀನಾಮೆ ಸ್ವೀಕಾರ ಮಾಡದೆ ರಾಜೀನಾಮೆ ಪತ್ರವನ್ನು ತಿಂಗಳವರೆಗೂ ಇಟ್ಟಕೊಂಡು ಈಗ ಅನರ್ಹಗೊಳಿಸಿದ್ದು ತಪ್ಪು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಡಿದ ಅವರು, ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರನ್ನು ಅನರ್ಹನಗೊಳಿಸುವ ಮೂಲಕ ಅವರ ವ್ಯಕ್ತಿತ್ವ ಹಾಗೂ ಹುದ್ದೆಗೆ ಅವಮಾನ ಮಾಡಿದ್ದಾರೆ. ನಿಮ್ಮ ಮಾತು, ನಡವಳಿಕೆಯನ್ನು ನೋಡಿ ಅದೇ ರೀತಿ ನಡೆದುಕೊಳ್ಳುತ್ತೀರಾ ಅಂದುಕೊಂಡಿದ್ವಿ. ಆದರೆ ನಿಮ್ಮ ನಡೆ ಬಹಳ ಭ್ರಮನಿರಸನವನ್ನು ತಂದಿದೆ ಎಂದರು.
ನೀವು ಓದಿದವರು, ತಿಳಿದವರು ಎಂಬ ನಂಬಿಕೆ ಇತ್ತು. ಆದರೆ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಲ್ಲ. ರಮೇಶ್ ಕುಮಾರ್ ಅವರು ಶಾಸಕರನ್ನು ಅನರ್ಹಗೊಳಿಸುವ ಮೂಲಕ ಒಂದು ಕರಾಳ ಅಧ್ಯಾಯವನ್ನು ಪ್ರಾರಂಭ ಮಾಡಿದ್ದಾರೆ. ಸ್ಪೀಕರ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಕ್ಕ ಉತ್ತರ ನೀಡುತ್ತದೆ ಎಂದರು.
ಅನರ್ಹ ಶಾಸಕರ ಪರವಾಗಿ ಬಿಜೆಪಿ ಸರ್ಕಾರ ನಿಲ್ಲುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ನೋಡಿ ಅನರ್ಹ ಶಾಸಕರ ಪರವಾಗಿ ಎನ್ನುವುದಕ್ಕಿಂತ ಪ್ರಜಾಪ್ರಭುತ್ವದ ಉಳಿವಿಗಾಗಿ ಬಿಜೆಪಿ ಪಕ್ಷ ನಿಲ್ಲುತ್ತದೆ. ನಾಳೆ ವಿಶ್ವಾಸಮತದಲ್ಲಿ ಬಿಜೆಪಿ ಪಕ್ಷದ ಎಲ್ಲಾ ಶಾಸಕರು ನೂರಕ್ಕೆ ನೂರು ವೋಟು ಹಾಕ್ತಾರೆ. ಆದ್ದರಿಂದ ವಿಶ್ವಾಸಮತದಲ್ಲಿ ನಾವು ಗೆಲ್ಲುತ್ತೇವೆ ಹಾಗೂ ಸುಭದ್ರ ಸರ್ಕಾರ ನಡೆಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.