ಹುಬ್ಬಳ್ಳಿ/ಧಾರಾವಾಡ: ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾಗಿರುವ 'ವಂದೇ ಭಾರತ್' ರೈಲು ಸಂಚಾರ ಧಾರವಾಡದಿಂದ ಆರಂಭವಾಗಿದೆ. ಈ ನಿಟ್ಟಿನಲ್ಲಿ ಲೋಕಾರ್ಪಣೆಯ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧಾರವಾಡದಿಂದ ಹುಬ್ಬಳ್ಳಿಯವರೆಗೆ ರೈಲಿನಲ್ಲಿ ಪ್ರಯಾಣಿಸಿದರು.
ವಂದೇ ಭಾರತ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚುಯಲ್ ಆಗಿ ಚಾಲನೆ ನೀಡಿದ್ದು, ಪ್ರಯೋಗಾರ್ಥವಾಗಿ ಪ್ರಯಾಣಿಸುವ ಮೂಲಕ ವಂದೇ ಭಾರತ್ ರೈಲಿನ ವೈಶಿಷ್ಟ್ಯವನ್ನು ಅನುಭವಿಸಿದರು. ರೈಲು ಸಂಚಾರದ ವೇಳೆಯಲ್ಲಿ ರಾಜ್ಯಪಾಲರು ಹಾಗೂ ಕೇಂದ್ರ ಸಚಿವರು ಉಪಹಾರ ಸೇವಿಸಿದ್ದು ವಿಶೇಷವಾಗಿತ್ತು.
ವಂದೇ ಭಾರತ ರೈಲಿಗೆ ಹುಬ್ಬಳ್ಳಿ ಮಹಿಳೆಯರಿಂದ ಅದ್ಧೂರಿ ಸ್ವಾಗತ: ಧಾರವಾಡ ರೈಲು ನಿಲ್ದಾಣದಿಂದ ವಂದೇ ಭಾರತ್ಗೆ ಚಾಲನೆ ಸಿಗುತ್ತಿದ್ದಂತೆ, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಧಿಕೃತ ಉದ್ಘಾಟನೆ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸುತ್ತಿರುವ ವಂದೇ ಭಾರತ್ ಸ್ವಾಗತಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು, ಮೋದಿ ಪರ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.
ಜನರ ಬೇಡಿಕೆಯಂತೆ ವಂದೇ ಭಾರತ್ ಪ್ರಾರಂಭ: ಧಾರವಾಡದಲ್ಲಿ ವಂದೇ ಭಾರತ್ ರೈಲು ಲೋಕಾರ್ಪಣೆಯ ಸಾಂಕೇತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, "ಧಾರವಾಡದಿಂದ ವಂದೇ ಭಾರತ್ ರೈಲು ಆರಂಭವಾಗಬೇಕೆಂಬ ಬೇಡಿಕೆಯಿತ್ತು. ಅದರಂತೆ ಧಾರವಾಡದಿಂದ ವಂದೇ ಭಾರತ್ ಆರಂಭಿಸಲಾಗಿದೆ. ಹುಬ್ಬಳ್ಳಿಯಲ್ಲಿ ವಂದೇ ಭಾರತ್ ಟೆಂಡರ್ ಪ್ರಕ್ರಿಯೆ ನಡೆದಿದೆ. ನಂತರದಲ್ಲಿ ಸಮಯ ಬದಲಾವಣೆ ಮಾಡಲಾಗುತ್ತದೆ" ಎಂದರು.
ಮುಂದುವರೆದು, "ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಯಲ್ಲಿ ವಂದೇ ಭಾರತ್ ರೈಲು ಸಂಚಾರ ಒಂದಾಗಿದೆ. ಈ ಸ್ವದೇಶಿ ರೈಲು ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲು ಓಡಿಸುವ ಗುರಿ ಇದೆ. ಬೆಳಗಾವಿ ಜನರಿಂದಲೂ ವಂದೇ ಭಾರತ್ ರೈಲಿಗೆ ಬೇಡಿಕೆ ಇದೆ. ಅದನ್ನು ಕೂಡ ಸರ್ಕಾರ ಈಡೇರಿಸುತ್ತದೆ. ಧಾರವಾಡ ವಂದೇ ಭಾರತ್ ರೈಲಿಗೆ 50 ಜನರು ಬುಕ್ಕಿಂಗ್ ಮಾಡಿದ್ದಾರೆ" ಎಂದು ತಿಳಿಸಿದರು.
ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, "ದೇಶದಲ್ಲಿ ರೈಲು ಆಧುನಿಕರಣ ನಡೆದಿದೆ. ಇದಕ್ಕೆ ನಾನು ರೈಲ್ವೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಲಿ ರೈಲು ಸೇವೆ ಸಾಕಷ್ಟು ಸಹಾಯ ನೀಡುತ್ತದೆ. ದೇಶದ ಅಭಿವೃದ್ಧಿಯಲ್ಲಿ ಇಲಾಖೆಯದ್ದು ಸಾಕಷ್ಟು ಪಾಲಿದೆ. ರೈಲ್ವೆ ಕೆಲಸಕ್ಕಾಗಿ ಕರ್ನಾಟಕಕ್ಕೆ 7000 ಕೋಟಿ ಹಣವನ್ನು ನೀಡಲಾಗಿದೆ. ಇದುವರೆಗೂ ನೀಡಿದ ಅತಿ ಹೆಚ್ಚು ಅನುದಾನ ಇದಾಗಿದೆ" ಎಂದರು.
"ಧಾರವಾಡ - ಬೆಂಗಳೂರು ನಡುವೆ ವಂದೇ ಭಾರತ್ ಆರಂಭವಾಗಿದೆ. ನಿಮಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ. ವಂದೇ ಭಾರತ್ ದೇಶದ ಗೌರವ ಮತ್ತು ಹೆಮ್ಮೆ. ಇದು ಸಂಪೂರ್ಣ ಸ್ವದೇಶಿ ನಿರ್ಮಿತ ರೈಲು. ಜೋಶಿ ಅವರು ಅನೇಕ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆ ಇಲಾಖೆಯವರು ಗಮನ ಹರಿಸುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಕಲಾವಿದ ಮಂಜುನಾಥ ಹಿರೇಮಠರಿಂದ ವಂದೇ ಭಾರತ ರೈಲಿನ ಮಾದರಿ ಕಲಾಕೃತಿ ತಯಾರಿ - ವಿಡಿಯೋ