ಹುಬ್ಬಳ್ಳಿ: ನಮ್ಮ ಜನ ಎಲ್ಲೆಲ್ಲೋ ಟೈಮ್ ಪಾಸ್ ಮಾಡ್ತಾರ. ತಾಸುಗಟ್ಟಲೇ ರೈಲೊಳಗೆ ಕುತ್ಕೊಂಡು ಪ್ರಯಾಣ ಬೆಳೆಸ್ತಾರ. ಆದ್ರೆ ರೈಲ್ವೆ ಫ್ಲಾಟಫಾರಂ ದಾಟಲು ತಮ್ಮ ಅಮೂಲ್ಯ ಜೀವನವನ್ನೇ ಪಣಕ್ಕಿಡೊ ಈ ದೃಶ್ಯಗಳು ಅಪಾಯಕ್ಕೆ ಆಹ್ವಾನ ನೀಡೋ ಹಂಗ ಕಾಣ್ತದ ನೋಡ್ರಿ.
ಹೌದು, ವಾಣಿಜ್ಯನಗರಿ ಹುಬ್ಬಳ್ಳಿಯ ನೈಋತ್ಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಅವಸರದಲ್ಲಿ ಅವೈಜ್ಞಾನಿಕ ಮಾರ್ಗವನ್ನು ಬಳಸುವ ಮೂಲಕ ತಮ್ಮ ಜೀವಕ್ಕೆ ತಾವೇ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಕೈಯಲ್ಲಿ ಎರಡು ಚೀಲ, ಮಕ್ಕಳು ಇಷ್ಟೆಲ್ಲ ಇದ್ದರೂ ಕೂಡ ರೈಲು ಬರೋದನ್ನೂ ಸಹ ಗಮನಿಸದೇ ಫ್ಲಾಟಫಾರಂ ದಾಟುವ ಹುಚ್ಚು ಸಾಹಸ ಮಾಡ್ತಿದ್ದಾರೆ. ಟ್ರೈನ್ ಹಾರ್ನ್ ಮಾಡುತ್ತಿದ್ದರೂ ಕೂಡ ಹಳಿಯಿಂದ ಹಳಿ ದಾಟಲಿಕ್ಕೆ ಮುಂದಾಗುತ್ತಿರುವುದು ವಿಪರ್ಯಾಸ ಅನಿಸ್ತದ.
ಮೇಲ್ಸೇತುವೆ, ಮೆಟ್ಟಿಲುಗಳು ಹಾಗೂ ಯಾಂತ್ರಿಕ ಎಸ್ಕಿಲೇಟರ್ ಸೌಲಭ್ಯಗಳಿದ್ದರೂ ಕೂಡ ಜನರು ಕೇವಲ ಒಂದೆರಡು ನಿಮಿಷಗಳ ಸಮಯ ಉಳಿತಾಯಕ್ಕೆ ಜೀವವನ್ನು ಪಣಕ್ಕಿಟ್ಟು ಫ್ಲಾಟಫಾರಂ ದಾಟುತ್ತಾರೆ. ವಯಸ್ಕರು ಮಾತ್ರವಲ್ಲದೆ ಮಹಿಳೆಯರು, ಮಕ್ಕಳು, ವೃದ್ಧರೂ ಸಹ ಇಂಥ ದುಸ್ಸಾಹಕ್ಕೆ ಮುಂದಾಗ್ತಿದಾರ.
ಈ ಬಗ್ಗೆ ರೈಲ್ವೆ ಇಲಾಖೆ ಸಿಬ್ಬಂದಿ ಸಲ ತಲೆಕೆಡಿಸಿಕೊಂಡಿದ್ದಾರೆ. ಪ್ರಯಾಣಿಕರಿಗೆ ಸುರಕ್ಷಿತ ಮಾರ್ಗ ಬಳಸುವಂತೆ ಮನವಿ ಮಾಡ್ತಾರ. ಆದ್ರೂ ಪ್ರಯಾಣಿಕರನ್ನು ತಮ್ಮ ಈ ಚಾಳಿ ಬಿಡೋದಿರೋದು ವಿಪರ್ಯಾಸ ಅನಿಸುತ್ತೆ. ತಮ್ಮ ಅಮೂಲ್ಯವಾದ ಜೀವನದ ಮಹತ್ವವನ್ನು ಜನ್ರು ಅರಿಯದೇ ಬೇಕಾಬಿಟ್ಟಿ ಓಡಾಡ್ತಿದಾರೆ. ಪ್ರಾಣಕ್ಕೆ ಕುತ್ತು ಬರೋ ಮುನ್ನ ಪ್ರಯಾಣಿಕರೇ ಎಚ್ಚೆತ್ತುಕೊಳ್ಳಬೇಕಿದೆ.