ಹುಬ್ಬಳ್ಳಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪಾಪದ ಕೊಡ ತುಂಬಿದ ನಂತರ ಬಿದ್ದು ಹೋಗಿದೆ. ಅಕ್ಕಪಕ್ಕ ಕೂರುತಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ ಪರಸ್ಪರ ಜಗಳ ಮಾಡುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಗರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುರಿದ ನಂತರ ತಾವು ತಾವೇ ಜಗಳ ಮಾಡುತ್ತಿದ್ದಾರೆ. ಜೆಡಿಎಸ್ ಶಾಸಕರು ಜೆಡಿಎಸ್ ಪಕ್ಷ ಬಿಟ್ಟು ಹೊರಗೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಇದರ ಲಾಭವನ್ನು ಬಿಜೆಪಿ ಪಡೆದು ಪದವೀಧರ ಚುನಾವಣೆಯನ್ನು ಗೆಲ್ಲಬೇಕು ಎಂದ್ರು.
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಒಗ್ಗಟ್ಟಿನಲ್ಲಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ದೇಶ ಕಾಂಗ್ರೆಸ್ ಮುಕ್ತವಾಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದರು. ಇನ್ನು ವಿಪಕ್ಷಗಳು ಕೇವಲ ನೆರೆ ವಿಚಾರವನ್ನಿಟ್ಟುಕೊಂಡು ಟೀಕೆ ಮಾಡುತ್ತಿವೆ. ಆದರೆ ನರೇಂದ್ರ ಮೋದಿ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಬಗ್ಗೆ ಗೊತ್ತಿಲ್ಲದೇ ಮನಸೋ ಇಚ್ಛೆ ಟೀಕೆ ಮಾಡುತ್ತಿವೆ ಎಂದ್ರು. ಇನ್ನು ಕೇಂದ್ರದಿಂದ ನೆರೆ ಪರಿಹಾರದ ಬಗ್ಗೆ ನಿರಾಶ್ರಿತರಿಂದ ಯಾವುದೇ ದೂರ ಬಂದಿಲ್ಲ. ಕೇವಲ ವಿಪಕ್ಷಗಳು ರಾಜಕಾರಣ ಮಾಡುವ ಉದ್ದೇಶದಿಂದ ಟೀಕೆ ಮಾಡುತ್ತಿವೆ ಎಂದು ಹರಿಹಾಯ್ದರು. ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಅಮೃತ ದೇಸಾಯಿ, ಶಾಸಕ ಶಂಕರ್ ಪಾಟೀಲ ಮುನ್ಯಾನೇಕೊಪ್ಪ, ಮಹೇಶ್ ಟೆಂಗಿನಕಾಯಿ, ಮಾಜಿ ಶಾಸಕಿ ಸೀಮಾ ಮಸೂತಿ ಮತ್ತಿತ್ತರು ಹಾಜರಿದ್ದರು.