ಹುಬ್ಬಳ್ಳಿ : ಕರ್ನಾಟಕದಲ್ಲಿ ಸರ್ಕಾರವನ್ನು ಅಭದ್ರಗೊಳಿಸಿ, ಅಭಿವೃದ್ಧಿ ಕೆಲಸಗಳಿಗೆ ಕೊಡಲಿ ಪೆಟ್ಟು ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸರ್ಕಾರವನ್ನು ಅಭದ್ರಗೊಳಿಸುವಂತಹ ಮಾತುಗಳು ಯಾವ ಪುರುಷಾರ್ಥಕ್ಕೆ? ಇದರ ಹಿಂದಿನ ಉದ್ದೇಶ ಏನು ? ಎಂದು ಸಚಿವ ಹೆಚ್ ಕೆ ಪಾಟೀಲ್ ಪ್ರಶ್ನಿಸಿದರು.
ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರಗಳನ್ನು ಅಭದ್ರಗೊಳಿಸುವುದು ಒಂದು ರೀತಿಯ ಷಡ್ಯಂತ್ರವಾಗಿದೆ. ಜನರಿಗೆ ಅಭಿವೃದ್ಧಿ ಕೆಲಸ ಆಗಬೇಕು. ಜನರು ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಬೇಕು. ಅದನ್ನು ಬಿಟ್ಟು ಮಾಧ್ಯಮಗಳ ಮೂಲಕ ಜನರ ಮನಸ್ಸನ್ನು ಅಭದ್ರಗೊಳಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಜನರಿಗೆ ಎಲ್ಲವೂ ಅರಿವಾಗಲು ಪ್ರಾರಂಭವಾಗಿದೆ ಎಂದು ಹೇಳಿದರು.
ಎಂಎಲ್ಎಗಳನ್ನು ಖರೀದಿ ವಸ್ತುಗಳನ್ನಾಗಿ ಮಾಡುವ ವಾತಾವರಣ ಸೃಷ್ಟಿ ಮಾಡ್ತಾ ಇದ್ದಾರೆ. ಆ ವಾತಾವರಣಕ್ಕೆ ಯಾರು ಬಲಿ ಆಗೋದಿಲ್ಲ. 17 ಜನರನ್ನು ಮುಂಬೈ, ಗೋವಾಕ್ಕೆ ಕರೆದೋಯ್ದು ಖರೀದಿ ಮಾಡಿದ್ದರು. ನಂತರ ಅವರಿಗೆ ಜನರು ಯಾವ ರೀತಿ ಉತ್ತರಿಸಿದರು ಎಂಬುದನ್ನು ನೋಡಿದ್ದೀವಲ್ಲ. ಇಷ್ಟಾದ ಮೇಲೇಯೂ ಮತ್ತೆ ಹಾಗೇ ಆಗುತ್ತೆ ಅಂತಾ ಯಾರಾದ್ರೂ ತಿಳಿದಿದ್ರೆ ಅದು ಅವರ ಭ್ರಮೆ ಎಂದು ಹೇಳಿದರು.
ಕಾಂಗ್ರೆಸ್ ಭ್ರಷ್ಟಾಚಾರ ಸರ್ಕಾರ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜೋಶಿಯವರು ಕೇಂದ್ರ ಸರ್ಕಾರದಲ್ಲೇ ಇದ್ದಾರಲ್ಲ. ತಾವು ಏನಿದ್ದಾರೆ ? ಏನು ಹೇಳ್ತಾ ಇದ್ದಾರೆ ಎಂಬುದರ ಅರಿವು ಇರಬೇಕು. ಭ್ರಷ್ಟಾಚಾರ ಸರ್ಕಾರ ಅಂದರೇ ನಿಮ್ಮ ಸೆಂಟ್ರಲ್ ವಿಜಿಲೆನ್ಸ್ ಏನು ಮಾಡ್ತಾ ಇದೆ? ಇಡಿ, ಸಿಬಿಐ, ಇನ್ಕಮ್ ಟ್ಯಾಕ್ಸ್ ಎಲ್ಲಾ ಮಾಡಿದ್ದೀರಲ್ಲ. ಅದು ಏನು ಮಾಡುತ್ತಿದೆ. ಈಗ 10 ವರ್ಷ ಆಯ್ತು ಯಾರು ನಿಮಗೆ ತಡೆದಿದ್ದು ಎಂದು ಅವರು ಪ್ರಶ್ನೆ ಮಾಡಿದರು.
ಮಹಾರಾಷ್ಟ್ರದಲ್ಲಿ ನೀವು ಭ್ರಷ್ಟಾಚಾರದ ಮೂಲಕ ಸರ್ಕಾರ ಬದಲಾಯಿಸಿ ಯಶಸ್ವಿಯಾಗಿದ್ದೀರಿ. ಅದು ನಿಮ್ಮ ಪ್ರಾಮಾಣಿಕತೆ ಅಲ್ವೇ ಎಂದು ಲೇವಡಿ ಮಾಡಿದ ಅವರು ಸರ್ಕಾರದಲ್ಲಿರುವವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಹೆಚ್ಡಿಕೆ ವಿರುದ್ಧ ಪಾಟೀಲ್ ವಾಗ್ದಾಳಿ : ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಅಭದ್ರ ಮಾಡುವುದು ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ನಾಯಕನ ಉದ್ದೇಶವಾಗಿರಬಾರದು ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದರು. ಹಲವು ಶಾಸಕರು ಬಿಜೆಪಿ ಸೇರ್ಪಡೆಯಾಗುವ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್ಡಿ ಕುಮಾರಸ್ವಾಮಿ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಕೊಡುವ ಪ್ರಯತ್ನವಾಗಿದೆ. ಈ ರೀತಿ ಪ್ರಯತ್ನ ಮಾಡಿದವರ ಪರಿಸ್ಥಿತಿ ಏನಾಗಿದೆ ಎಂದು ಗೊತ್ತಿದೆಯಲ್ಲ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂಬ ಹೆಚ್ಡಿಕೆ ಹೇಳಿಕೆ: ಸಚಿವರು ಹೇಳಿದ್ದೇನು?