ಹುಬ್ಬಳ್ಳಿ: ಕೊರೊನಾ ಹರಡುವ ಭೀತಿ ಹಿನ್ನೆಲೆ ನಗರದ ಜನಪ್ರಿಯ ಮಾರುಕಟ್ಟೆಯಾಗಿರುವ ನ್ಯಾಷನಲ್ ಮಾರುಕಟ್ಟೆಯ ಅಂಗಡಿಗಳನ್ನು ಜೂ.1 ರವರೆಗೆ ತೆರೆಯದಿರಲು ವ್ಯಾಪಾರಸ್ಥರು ತೀರ್ಮಾನಿಸಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಮಾಡಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಹೀಗಾಗಿ ನ್ಯಾಷನಲ್ ಮಾರುಕಟ್ಟೆಯ ಅಂಗಡಿಗಳನ್ನು ತೆರೆಯಲಾಗಿತ್ತು. ಆದರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನ್ಯಾಷನಲ್ ಮಾರ್ಕೆಟ್ ಮಾಲೀಕರ ಸಂಘ ಅಂಗಡಿಗಳನ್ನು ತೆರೆಯದಿರಲು ತೀರ್ಮಾನಿಸಿದೆ.
ಸಂಘದ ಸದಸ್ಯರಾದ ಅಬ್ದುಲ್ ರೆಹಮಾನ್ ಸಾಬರಗಟಿ, ಸುಭಾಷ್ ಅಂಕಲಕೊಟಿ, ಶಬ್ಬೀರ ಚುಹ್ವೆ,ನಾರಾಯಣ ಕದಮ, ಪವನ ಕಾಟವೆ, ನಿಯಾಝ್ ಪಠಾಣ ಸೇರಿದಂತೆ ಇತರರು ಸೇರಿ ಈ ನಿರ್ಧಾರ ಕೈಗೊಂಡಿದ್ದಾರೆ.