ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ವಿಶ್ವದ ಉದ್ದನೆಯ ಪ್ಲಾಟ್ ಫಾರ್ಮ್ ಕಾರ್ಯ ಭರದಿಂದ ಸಾಗಿದ್ದು, ಜನವರಿ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣ ವಿಶ್ವದ ಅತಿ ಉದ್ದದ ಪ್ಲಾಟ್ ಫಾರ್ಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ನಗರದ ರೈಲು ನಿಲ್ದಾಣದಲ್ಲಿ ಈಗಿರುವ ಪ್ಲಾಟ್ ಫಾರ್ಮ್ ಉದ್ದವನ್ನು ಹೆಚ್ಚಿಸಲಾಗುತ್ತಿದ್ದು, 2021ರ ಜನವರಿ ಅಂತ್ಯದ ವೇಳೆಗೆ ಸಾರ್ವಜನಿಕರ ಸೇವೆಗೆ ಸಿದ್ಧಗೊಳ್ಳಲಿದೆ. ಈಗಿರುವ ಒಂದನೇ ಪ್ಲಾಟ್ ಫಾರ್ಮ್ 550 ಮೀಟರ್ ಉದ್ದವಿದ್ದು, ಇದನ್ನು ಮೊದಲು 1,400 ಮೀಟರ್‌ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿತ್ತು. ನೈರುತ್ಯ ರೈಲ್ವೆಯು ಈಗ ಇದರ ಉದ್ದವನ್ನು 1,505 ಮೀಟರ್‌ಗೆ ಹೆಚ್ಚಿಸುತ್ತಿದ್ದು, ಕಾಮಗಾರಿಗೆ ವೇಗ ನೀಡಲಾಗಿದೆ.
ಈಶಾನ್ಯ ರೈಲ್ವೆಯ ಪ್ರಧಾನ ಕಚೇರಿ ಹೊಂದಿರುವ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 1,366 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ಇದ್ದು, ಇದು ಸದ್ಯಕ್ಕೆ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಆಗಿದೆ. 2013ರಲ್ಲಿ ನವೀಕರಣ ಮಾಡಿದ ಬಳಿಕ, ಇದು ವಿಶ್ವದ ಉದ್ದದ ಪ್ಲಾಟ್ ಫಾರ್ಮ್ ಎಂದು ಘೋಷಣೆಯಾಗಿತ್ತು.