ಹುಬ್ಬಳ್ಳಿ: ಮಾಜಿ ಸಿಎಂ, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸ್ವಯಂ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಈ ಬಾರಿ ಶೆಟ್ಟರ್ ಒಬ್ಬರಿಗೇ ಟಿಕೆಟ್ ತಪ್ಪಿಸಿಲ್ಲ. ಹಲವಾರು ಹಿರಿಯರಿಗೆ ಟಿಕೆಟ್ ಕೊಟ್ಟಿಲ್ಲ. ಕಾರಣವನ್ನು ಅವರಿಗೆ ಹೇಳಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ ಯಾವುದೇ ವ್ಯಕ್ತಿಯ ಕಪಿಮುಷ್ಠಿಯಲ್ಲಿ ಇಲ್ಲ. ಟೀಂ ವರ್ಕ್ ಮೂಲಕವೇ ಕೆಲಸ ಮಾಡುತ್ತಿರುವ ರಾಜಕೀಯ ಪಕ್ಷ. ಕಾಂಗ್ರೆಸ್ ಪಿಎಫ್ಐಗೆ ವಿಶೇಷ ಟ್ರೀಟ್ಮೆಂಟ್ ಕೊಟ್ಟಿತ್ತು. ಆದರೆ ನಾವು ಇದಕ್ಕೆ ಲಗಾಮು ಹಾಕಿದ್ದೇವೆ. ಕಾಂಗ್ರೆಸ್ ಕಿತ್ತೂರು ಕರ್ನಾಟಕಕ್ಕೆ ಅಪಮಾನಿಸುವ ಕೆಲಸ ಮಾಡಿತು. ಅಲ್ಲದೇ ಮಹಾದಾಯಿ ಹೋರಾಟಕ್ಕೆ ಕಾಂಗ್ರೆಸ್ ನ್ಯಾಯ ನೀಡಲಿಲ್ಲ. ಆದರೆ ನಮ್ಮ ಬಿಜೆಪಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದೆ. ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆದು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಇನ್ನು ಕಬ್ಬು ಬೆಳಗಾರರಿಗೆ ಬಿಜೆಪಿ ನ್ಯಾಯ ಒದಗಿಸಿದೆ. 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಹಿಂದೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಸಾವಿರ ಕೋಟಿ ಲೆಕ್ಕದಲ್ಲಿ ಹಣ ಕೊಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರವು ಅವರು ಕೊಟ್ಟ ಹಣಕ್ಕಿಂತ ಹೆಚ್ಚು 2.40 ಲಕ್ಷ ಕೋಟಿ ಅನುದಾನ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಧರ್ಮಾಧಾರಿತ ಮೀಸಲಾತಿ ಕುರಿತಂತೆ ಮುಸ್ಲಿಂ ಮೀಸಲಾತಿ ತರಲಾಗುವುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಹಾಗಾದರೆ ಯಾರ ಮೀಸಲಾತಿ ಕಡಿತ ಮಾಡುತ್ತೆ ಎಂಬುದನ್ನು ಕಾಂಗ್ರೆಸ್ ಹೇಳಲಿ. ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿತ್ತು. ಅದನ್ನು ನಮ್ಮ ಸರ್ಕಾರ ರದ್ದು ಮಾಡಿದೆ. ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದೆ. ಧರ್ಮಾಧಾರಿತ ಮೀಸಲಾತಿ ಸಾಂವಿಧಾನಿಕವಲ್ಲ. ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಧರ್ಮಾಧಾರಿತ ಮೀಸಲಾತಿ ನೀಡಿತ್ತು. ಧರ್ಮಾಧಾರಿತ ಮೀಸಲಾತಿ ಎಂದೂ ಒಪ್ಪಲ್ಲ ಎಂದು ಶಾ ಪುನರುಚ್ಚರಿಸಿದರು.
ಕಾಂಗ್ರೆಸ್ ಲಿಂಗಾಯತರಿಗೆ ಪದೆ ಪದೇ ಅಪಮಾನ ಮಾಡಿದೆ - ಅಮಿತ್ ಶಾ : ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಯಿಸಿ, ಬಿಜೆಪಿ ಒಂದು ಜಾಗದಲ್ಲಿಯೂ ಲಿಂಗಾಯತರನ್ನು ತೆಗೆದು ಬೇರೆಯವರಿಗೆ ಟಿಕೆಟ್ ಕೊಟ್ಟಿಲ್ಲ. ಕಾಂಗ್ರೆಸ್ ಲಿಂಗಾಯತರಗೆ ಪದೆ ಪದೇ ಅಪಮಾನ ಮಾಡಿದೆ ಎಂದು ಶಾ ಆರೋಪಿಸಿದರು. ಇಂದು ನಾಮಪತ್ರ ವಾಪಸ್ ಪಡೆಯೋ ಪ್ರಕ್ರಿಯೆ ಮುಗಿದಿದೆ. ನಾಳೆಯಿಂದ ಅಧಿಕೃತವಾಗಿ ಚುನಾವಣೆ ಪ್ರಚಾರ ನಡೆಯಲಿದೆ. ನವ ಕರ್ನಾಟಕ ಧ್ಯೇಯದೊಂದಿಗೆ ಬಿಜೆಪಿ ಪೂರ್ಣ ಬಹುಮತದೊಂದಿದೆ ಅಧಿಕಾರಕ್ಕೆ ಬರುತ್ತದೆ. ಆದರೆ ಕಾಂಗ್ರೆಸ್ನದ್ದು ರಿವರ್ಸ್ ಗೇರ್ ಆಗಲಿದ್ದು, ಅವರಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಡಬಲ್ ಇಂಜಿನ್ ಸರ್ಕಾರ ಏನಂತ ಈಗಾಗಲೇ ಗೊತ್ತಾಗಿದೆ ಎಂದು ಹೇಳಿದ್ರು.
ಇದನ್ನೂ ಓದಿ:ವೀರಶೈವ ಮತಗಳು ಕೈಬಿಡುತ್ತವೆ ಎಂಬ ಆತಂಕ ಇಲ್ಲ : ಸಿಎಂ ಬೊಮ್ಮಾಯಿ