ಹುಬ್ಬಳ್ಳಿ: "ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ. ಆದರೆ ನಾನು ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ನನಗಾಗಿರುವ ಅಪಮಾನವನ್ನು ಇನ್ನೂ ಮರೆತಿಲ್ಲ" ಎಂದು ಕಾಂಗ್ರೆಸ್ ನಾಯಕ ಹಾಗು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಬಿಜೆಪಿ ತೊರೆದ ನಂತರ ಆಗಿರುವ ಹಾನಿ ಬಗ್ಗೆ ಅವರಿಗೆ ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ಕೆಲವರು ನನ್ನನ್ನು ವಾಪಸ್ ಕರೆತರುವ ಪ್ರಯತ್ನದಲ್ಲಿದ್ದಾರೆ. ಆದರೆ ಪಕ್ಷದ ಮುಖಂಡರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ, ಈ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ನಾನು ಬಿಜೆಪಿಗೆ ಹಿಂದಿರುಗಿ ಹೋಗಲ್ಲ" ಎಂದರು.
ಸಿಎಂ ಸಿದ್ದರಾಮಯ್ಯ ಕುರಿತು ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಅನಂತ್ ಕುಮಾರ್ ಹೆಗಡೆ ಹದ್ದು ಮೀರಿ ವರ್ತಿಸುತ್ತಿದ್ದಾರೆ. ಲಕ್ಷ್ಮಣ ರೇಖೆ ದಾಟಿ ಮಾತನಾಡುತ್ತಿದ್ದಾರೆ. ಇಷ್ಟು ದಿನ ನಾಪತ್ತೆಯಾದವರು ಈಗ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ತಮ್ಮ ಜಿಲ್ಲೆಗೆ ಬಂದಾಗ ಇವರು ಎಲ್ಲಿ ಹೋಗಿದ್ದರು?. ಈಗ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿದ್ದವರ ಮೇಲೆ ಈ ರೀತಿ ಮಾತಾಡೋದು ಸರಿಯಲ್ಲ. ಪ್ರಧಾನಿ ಮೋದಿ ಬಗ್ಗೆ ಈ ರೀತಿ ಮಾತನಾಡಿದರೆ ಸುಮ್ಮನೆ ಇರುತ್ತಾರಾ" ಎಂದು ಶೆಟ್ಟರ್ ಪ್ರಶ್ನಿಸಿದರು.
"ಶ್ರೀರಾಮ ಮಂದಿರವನ್ನು ಬಿಜೆಪಿ ದಾಳವನ್ನಾಗಿ ಮಾಡಿಕೊಳ್ಳುತ್ತಿದೆ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣವಿರಬಾರದು. ಆದರೆ ಬಿಜೆಪಿ ಧರ್ಮದಲ್ಲಿ ರಾಜಕಾರಣವನ್ನು ಬೆರೆಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ಗೆ ಆಹ್ವಾನ ನೀಡಿರುವುದು ದೇವಸ್ಥಾನದ ಟ್ರಸ್ಟ್ ಹೊರತು ಬಿಜೆಪಿ ಅಲ್ಲ. ಕಾಂಗ್ರೆಸ್ ಆಹ್ವಾನ ನಿರಾಕರಿಸಿರುವುದರ ಕುರಿತು ಟ್ರಸ್ಟ್ ಬೇಕಿದ್ದರೆ ಮಾತನಾಡಲಿ. ಅದನ್ನು ಬಿಟ್ಟು ಬಿಜೆಪಿಯವರು ಯಾಕೆ ಮಾತನಾಡುತ್ತಾರೆ. ಬಿಜೆಪಿಗೂ ರಾಮಮಂದಿರಕ್ಕೂ ಏನು ಸಂಬಂಧ. ರಾಮಮಂದಿರ ವಿಚಾರ ರಾಜಕಾರಣ ಆಗಲೇಬಾರದು. ನನ್ನನ್ನು ಸೇರಿಯೇ ರಾಮಮಂದಿರ ಆಗಬೇಕು ಎಂಬುದು ನೂರಾರು ಕೋಟಿ ಜನರ ಅಭಿಲಾಷೆಯಾಗಿತ್ತು" ಎಂದರು.
ಬೇರೆ ಪಕ್ಷಗಳ ನಾಯಕರನ್ನು ಕಾಂಗ್ರೆಸಿಗೆ ಕರೆತರುವಂತಹ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ಯಾವುದೇ ಬಿಜೆಪಿ ನಾಯಕರನ್ನು ಕಾಂಗ್ರೆಸ್ಗೆ ತರುವಂತ ಕೆಲಸ ನಾನು ಮಾಡಿಲ್ಲ. ತಾವಾಗಿಯೇ ಬಂದವರನ್ನು ಸಿಎಂ ಹಾಗೂ ಡಿಸಿಎಂಗೆ ಭೇಟಿ ಮಾಡಿಸಿದ್ದೇನೆ. ಕಾಂಗ್ರೆಸ್ಗೆ ಸೇರಿಸುವಂತಹ ಪ್ರಯತ್ನ ಮಾಡಿದ್ದೇನೆ ಅಷ್ಟೇ. ಆಪರೇಷನ್ ಅಂತಾರಲ್ಲ ಆ ರೀತಿ ನಾನು ಯಾವತ್ತು ಮಾಡಿಲ್ಲ, ಈಗಲೂ ಮಾಡಲ್ಲ" ಎಂದು ಹೇಳಿದರು.
ಇದನ್ನೂ ಓದಿ: ವಿ.ಸೋಮಣ್ಣರಿಗೆ ರಾಜ್ಯಸಭಾ ಟಿಕೆಟ್ ನೀಡಿದರೆ ಸ್ವಾಗತ: ಆರ್.ಅಶೋಕ್