ಹುಬ್ಬಳ್ಳಿ: ಬಿ.ಎಸ್. ಯಡಿಯೂರಪ್ಪ ಅವರ ಡೈರಿ ಕೇಸನ್ನ ಲೋಕಪಾಲ್ಗೆ ಕೊಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವ್ರು, ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಸತ್ಯವಂತರಾದ್ರೆ ಹೆದರಿಕೆ ಏಕೆ. ಕಳ್ಳ ಮನಸ್ಸು ಇರೋದ್ರಿಂದ ಹೀಗೆ ಹೇಳುತಿದ್ದಾರೆ. ಪ್ರಾಮಾಣಿಕವಾಗಿದ್ದರೆ ಲೋಕಪಾಲ್ಗೆ ಈ ಕೇಸ್ ವಹಿಸಲಿ ಎಂದು ಸವಾಲು ಹಾಕಿದ್ದಾರೆ.
ಇನ್ನು ತುಮಕೂರು ಲೋಕಸಭೆ ಟಿಕೆಟ್ ಕೈತಪ್ಪಿದ್ದರಿಂದ ಸಂಸದ ಮುದ್ದುಹನುಮೇಗೌಡಗೆ ಅಸಮಾಧಾನವಿದೆ. ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಜೊತೆ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಇದೇ ವೇಳೆ ಸಚಿವ ಸಿ.ಎಸ್.ಶಿವಳ್ಳಿ ಅವರ ಅಗಲಿಕೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ಶಿವಳ್ಳಿ ಅವರು ಪ್ರಾಮಾಣಿಕರು. ಸರಳ ಮತ್ತು ಸಜ್ಜನ ರಾಜಕಾರಣಿ. ನನಗೂ ಶಿವಳ್ಳಿಗೂ ಬಹಳ ವರ್ಷದ ಪರಿಚಯವಿತ್ತು. ಮೂರು ಬಾರಿ ಶಾಸಕರಾದವರನ್ನ ಈ ಬಾರಿ ಮಂತ್ರಿ ಮಾಡಲಾಗಿತ್ತು, ಇಷ್ಟು ಬೇಗ ಅವರು ನಮ್ಮನ್ನೆಲ್ಲ ಅಗಲುತ್ತಾರೆ ಅನ್ನಿಸಿರಲಿಲ್ಲ. ಶಿವಳ್ಳಿ ಅವರ ನಿಧನದಿಂದ ಈ ಭಾಗದಲ್ಲಿ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ ಎಂದಿದ್ದಾರೆ.