ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ತೀವ್ರ ಚರ್ಚೆಗೆ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ತಿಲಾಂಜಲಿ ಹಾಡಿದ್ದಾರೆ. ಟಿಪ್ಪು ಸೇರಿ ಎಲ್ಲ ಜಯಂತಿಗೂ ಅವಕಾಶವನ್ನು ಮಹಾನಗರ ಪಾಲಿಕೆ ನೀಡುತ್ತದೆ ಎಂದು ಈರೇಶ ಅಂಚಟಗೇರಿ ಸ್ಪಷ್ಟಪಡಿಸಿದರು.
ಮಹಾನಗರ ಪಾಲಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಜಯಂತಿಗಳಿಗೆ ಅವಕಾಶ ಕುರಿತಂತೆ ವಿರೋಧ ಪಕ್ಷದ ನಾಯಕರು ಮತ್ತು ಆಯುಕ್ತರೊಂದಿಗೆ ಸಭೆ ಮಾಡಿ ಒಂದು ನಿರ್ಣಯಕ್ಕೆ ಬಂದಿದ್ದೇವೆ. ಟಿಪ್ಪು ಜಯಂತಿ ಸೇರಿ ಕನಕದಾಸ, ಒನಕೆ ಓಬವ್ವ ಜಯಂತಿ ಆಚರಣೆ ಮನವಿ ಮಾಡಿದ್ದ ಸಂಘಟಕರಿಗೆ ಅವಕಾಶ ನೀಡಲಾಗಿದ್ದು, ಕೆಲ ಷರತ್ತುಗಳನ್ನು ವಿಧಿಸಿದ್ದೇವೆ ಎಂದರು.
ಅವಕಾಶಕ್ಕೆ ಕಾಂಗ್ರೆಸ್ನಿಂದ ಅಪಸ್ವರ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಬೇಡ ಎನ್ನುತ್ತಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ದೊರರಾಜ ಮಣಿಕುಂಟ್ಲ ಹೇಳಿದರು. ನಾವು ಈದ್ಗಾ ಮೈದಾನದಲ್ಲಿ ಜಯಂತಿ ಆಚರಣೆ ಬೇಡಾ ಎಂದಿದ್ದೇವೆ. ಮೊದಲು ಮೇಯರ್ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿದ್ದಿಲ್ಲ. ಆದ್ರೆ ಅವರಿಗೆ ತಮ್ಮ ಪಕ್ಷದ ಅಧ್ಯಕ್ಷರ ಫೋನ್ ಬಂದ ಮೇಲೆ ಅವಕಾಶ ಕೊಟ್ಟಿದ್ದಾರೆ. ಇದೆಲ್ಲ ರಾಜಕೀಯ ಎಂದು ಮೇಯರ್ ವಿರುದ್ದ ಕಿಡಿಕಾರಿದರು.
ಎಐಎಂಐಎಂ ಪಕ್ಷದಿಂದ ಇಬ್ಬಗೆ ನೀತಿ: AIMIM ಜಿಲ್ಲಾಧ್ಯಕ್ಷ ನಜೀರ್ ಸಾಬ್ ಹೊನ್ಯಾಳ್ ಮಾತನಾಡಿ, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ನಮ್ಮ ಪಕ್ಷದ ವಿರೋಧವಿದೆ. ಯಾಕಂದ್ರೆ ಅದು ಪವಿತ್ರ ಸ್ಥಳ. ಕೋರ್ಟ್ನಲ್ಲಿ ಕೇಸ್ ಇದೆ. ಟಿಪ್ಪು ಬಗ್ಗೆ ನಮಗೆ ಗೌರವ ಇದೆ. ಆದ್ರೆ ಈದ್ಗಾ ಮೈದಾನದಲ್ಲಿ ಆಚರಣೆ ಬೇಡಾ. ಮನವಿ ಕೊಟ್ಟಿದ್ದು ನಮ್ಮ ಪಕ್ಷದಿಂದ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ನಾನು ನಮ್ಮ ರಾಷ್ಟ್ರದ ನಾಯಕರಿಗೆ ಮಾಹಿತಿ ನೀಡಿದ್ದೇನೆ ಎಂದರು.
ಇನ್ನೊಂದೆಡೆ ಮಹಾನಗರ ಪಾಲಿಕೆ ನಿರ್ಧಾರವನ್ನು ಎಐಎಂಐಎಂನ ಮುಖಂಡ ವಿಜಯ ಗುಂಟ್ರಾಳ ಸ್ವಾಗತ ಮಾಡಿ ಮಾತನಾಡಿ, ಮಹಾನಗರ ಪಾಲಿಕೆ ನಮಗೆ ಅವಕಾಶ ನೀಡಿದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದ್ರೆ ನಮ್ಮ ಪಕ್ಷದ ಕೆಲವರು ಯಾವುದೋ ಒತ್ತಡಕ್ಕೆ ಮಣಿದು ವಿರೋಧ ಮಾಡುತ್ತಿದ್ದಾರೆ. ನಾವು ಅದ್ದೂರಿಯಾಗಿ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದರು.
ಇದನ್ನು ಓದಿ:ನನ್ನ ಹೇಳಿಕೆ ಹಿಂಪಡೆಯುತ್ತಿದ್ದೇನೆ.. ಸಿಎಂಗೆ ಪತ್ರ ಬರೆದ ಸತೀಶ್ ಜಾರಕಿಹೊಳಿ