ಹುಬ್ಬಳ್ಳಿ: ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಸೋಮವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆಗೆ ಅವಳಿ ನಗರದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಹು-ಧಾ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ವೊಂದಕ್ಕೆ 50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮಳೆಯೊಂದಿಗೆ ಬಲವಾಗಿ ಗಾಳಿ ಬೀಸಿದ್ದರ ಪರಿಣಾಮ ಮರಗಳ ರೆಂಬೆ-ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದಿದ್ದವು. ಹುಬ್ಬಳ್ಳಿ ನಗರದಲ್ಲಿ 56 ವಿದ್ಯುತ್ ಕಂಬಗಳು, 6 ಪರಿವರ್ತಕ (ಟ್ರಾನ್ಸ್ಫಾರ್ಮರ್) ಗಳು ಹಾಳಾಗಿವೆ. ಧಾರವಾಡದ ಸಪ್ತಾಪುರದಲ್ಲಿ ಒಂದು ವಿದ್ಯುತ್ ಪರಿವರ್ತಕ ಸುಟ್ಟಿದೆ. ಅರ್ಧ ಗಂಟೆಯ ಮಳೆ ಹೆಸ್ಕಾಂಗೆ ಅರ್ಧ ಕೋಟಿಯಷ್ಟು ಹಾನಿ ಮಾಡಿದೆ.
ಧಾರವಾಡಕ್ಕಿಂತ ಹುಬ್ಬಳ್ಳಿಯಲ್ಲಿ ಗಾಳಿ, ಮಳೆಯ ಅಬ್ಬರ ಜೋರಾಗಿತ್ತು. ಜಿಲ್ಲೆಯಲ್ಲಿ ವಿವಿಧೆಡೆ ಅನಿರೀಕ್ಷಿತ ಮಳೆಯಾದರೂ ಹುಬ್ಬಳ್ಳಿಯಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಜನಜೀವನ ಅಸ್ತವ್ಯಸ್ತವಾಗಿತ್ತು. ಕೆಲವೆಡೆ ಮನೆಗಳ ಮೇಲೆ ಮರಗಳು ಬಿದ್ದಿದ್ದವು. ಮನೆಗಳು ಹಾಗೂ ನೆಲಮಹಡಿ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿತ್ತು. ಸೋಮವಾರ ಸಂಜೆ 5 ಗಂಟೆಯ ವೇಳೆಗೆ ಕಾರ್ಯಪ್ರವೃತ್ತರಾದ ಹೆಸ್ಕಾಂ ಅಧಿಕಾರಿಗಳು, ಸೆಕ್ಷನ್ ಆಫೀಸರ್ಸ್ ಹಾಗೂ ಲೈನ್ಮನ್ಗಳು ತ್ವರಿತವಾಗಿ ಕಾರ್ಯ ನಿರ್ವಹಿಸಿದರು.