ಹುಬ್ಬಳ್ಳಿ: ಅಕ್ಷರ ಅಭ್ಯಾಸ ಕಲಿತು, ಓಡಾಡಿ ಬೆಳೆದ ಶಾಲೆಗೆ ಹತ್ತಿದ್ದ ಬೆಂಕಿ ನಂದಿಸಲು ಹೋದ ಹಳೆಯ ವಿದ್ಯಾರ್ಥಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಹಾನಗಲ್ ತಾಲೂಕಿನ ಯಲಿವಾಳ ಗ್ರಾಮದ ನಿವಾಸಿ ಮಾರುತಿ ದೇವೆಂದ್ರಪ್ಪ ರಂಗಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು.
ಗ್ರಾಮದ ಹೊರ ವಲಯದಲ್ಲಿನ ಹುಲ್ಲಿನ ಬಣವೆಗೆ ಬೆಂಕಿ ತಗುಲಿತ್ತು. ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಶಾಲಾ ಕಟ್ಟಡವನ್ನೇ ಆವರಿಸಿತು. ಇದನ್ನು ಗಮನಿಸಿದ ಮಾರುತಿ ತಕ್ಷಣವೇ ಶಾಲಾ ಕಟ್ಟಡದ ಮೇಲ್ಚಾವಣಿ ಏರಿ ಬೆಂಕಿ ನಂದಿಸಲು ಮುಂದಾಗಿದ್ದರು.
ಚಾವಣಿಗೂ ಬೆಂಕಿಯ ಪ್ರಖರತೆ ಹೆಚ್ಚಿ ಮಾರುತಿ ಅವರಿಗೆ ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿದೆ. ಬೆಂಕಿಯ ಕೆನ್ನಾಲಿಗೆ ದೇಹದ ಶೇ 70ರಷ್ಟು ಭಾಗಕ್ಕೆ ಘಾಸಿಗೊಳಿಸಿದೆ. ಗಾಯಾಳು ಮಾರುತಿ ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
9ನೇ ತರಗತಿಯವರೆಗೂ ಇದೇ ಶಾಲೆಯಲ್ಲಿ ಓದಿದ್ದ ಮಾರುತಿ, ಮನೆಯಲ್ಲಿನ ಬಡತನಕ್ಕೆ ಮಧ್ಯದಲ್ಲಿಯೇ ಶಾಲೆ ಬಿಟ್ಟರು. ಊರಲ್ಲಿ ಸಣ್ಣ- ಪುಟ್ಟ ಕೆಲಸಗಳನ್ನು ಮಾಡಿಕೊಂಡು ತಂದೆ- ತಾಯಿಗೆ ಆಸರೆ ಆಗಿದ್ದ. ತಾನು ಕಲಿತ ಶಾಲೆ ಕಣ್ಣೆದುರು ಸುಟ್ಟು ಹೋಗುತ್ತಿರುವುದನ್ನು ನೋಡಲಾರದೆ ಏಕಾಂಗಿಯಾಗಿ ಬೆಂಕಿ ನಂದಿಸಲು ಮುಂದಾಗಿದ್ದಾನೆ. ಬೆಂಕಿಯ ಅವಘಡದಲ್ಲಿ ಗಾಯಗೊಂಡಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.