ಧಾರವಾಡ: ಸುಮಾರು 9 ದಿನಗಳಿಂದ ಧಾರವಾಡ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯು ಕೊಂಚ ಇಳಿಮುಖವಾಗಿದೆ. ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ. 187 ಜಾನುವಾರುಗಳು ಸಾವಿಗೀಡಾಗಿದ್ದು, ಸುಮಾರು 7 ಸಾವಿರ ಮನೆಗಳಿಗೆ ಹಾನಿಯಾಗಿದೆ. 94 ಪರಿಹಾರ ಕೇಂದ್ರಗಳಲ್ಲಿ 23 ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ.
ಜೀವ ಹಾನಿ, ಆಸ್ತಿ-ಪಾಸ್ತಿ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ವಿತರಿಸುವ ಕಾರ್ಯವನ್ನು ಜಿಲ್ಲಾಡಳಿತ ಚುರುಕುಗೊಳಿಸಿದೆ. ಕಳೆದ ಹತ್ತು ವರ್ಷಗಳಲ್ಲಿಯೇ ಈ ಭಾರಿ ಅಧಿಕ ಪ್ರಮಾಣದಲ್ಲಿ ಮಳೆ ಬಂದಿದೆ.
ಹಾನಿಯಾದ ಮನೆಗಳ ಪೈಕಿ 3 ಸಾವಿರ ಮನೆಗಳಿಗೆ ₹2.21 ಕೋಟಿ ಪರಿಹಾರ ನೀಡಲಾಗಿದೆ. 4 ಸಾವಿರಕ್ಕೂ ಅಧಿಕ ಮನೆಗಳಿಗೆ ಪರಿಹಾರ ಸಿದ್ಧಪಡಿಸಲಾಗುತ್ತಿದೆ. ಸಾವಿಗೀಡಾದ ಜಾನುವಾರುಗಳ ಮಾಲೀಕರಿಗೆ ₹3.33 ಲಕ್ಷ ಪರಿಹಾರ ನೀಡಲಾಗಿದೆ.
ನೆರೆ ಹಾವಳಿಗೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ: ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್, ಶಿರಗುಪ್ಪಿ , ಇಂಗಳಹಳ್ಳಿಗಳಲ್ಲಿ ಅತಿವೃಷ್ಟಿ ಹಾಗೂ ಬೆಣ್ಣಿಹಳ್ಳದ ಪ್ರವಾಹದಿಂದ ಉಂಟಾದ ಹಾನಿ ಪ್ರದೇಶಗಳಿಗೆ ಭೇಡಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿ ಹಾನಿಗೆ ಒಳಗಾಗಿರುವ ಮನೆಗಳನ್ನು ವೀಕ್ಷಿಸಿ, ಶೀಘ್ರ ಹಾನಿ ಪ್ರಮಾಣ ಪರಿಶೀಲಿಸಿ. ಅವುಗಳಿಗೆ ಪರಿಹಾರಧನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ, ಸಂಸ್ರಸ್ತರಿಗೆ ಸರಿಯಾದ ಆಹಾರ, ವೈದ್ಯಕೀಯ ಸೌಲಭ್ಯ ದೊರುಯುತ್ತಿರುವುದರ ಬಗ್ಗೆ ಖಾತರಿಪಡಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಗ್ರಾಮಸ್ಥರು, ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಹಾಗೂ ತಾತ್ಕಾಲಿಕವಾಗಿ ಅನುಕೂಲವಾಗುವಂತೆ ಸೀಮೆಎಣ್ಣೆ ಒದಗಿಸಲು ಮನವಿ ಮಾಡಿದರು. ಜಿಲ್ಲಾಧಿಕಾರಿ ತ್ವರಿತವಾಗಿ ವಿದ್ಯುತ್ ಸಮಸ್ಯೆ ಬಗೆಹರಿಸುವುದಾಗಿ ಹಾಗೂ ಆಹಾರ ಇಲಾಖೆಯಿಂದ ಪಡಿತರ ಮತ್ತು ಸೀಮೆಎಣ್ಣೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಪರಿಹಾರ ಸಾಮಗ್ರಿ ಸಂಗ್ರಹಣೆ ಕೇಂದ್ರ ಸ್ಥಾಪನೆ: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಸಂತ್ರಸ್ತರ ನೆರವಿಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪರಿಹಾರ ಸಾಮಗ್ರಿಗಳ ಸಂಗ್ರಹಣೆ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ್ ಕುಮಾರ್ ಥಾಕ್ರೆ ತಿಳಿಸಿದರು.