ಹುಬ್ಬಳ್ಳಿ: ಶಾಲೆಯ ನಿರ್ಮಾಣ ಹಂತದ ಗೋಡೆ ಕುಸಿದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದು, ಮತ್ತೋರ್ವ ಬಾಲಕ ತೀವ್ರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಕಿರೇಸೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಾಲಕ ವಿಶ್ರುತ್ ಮೃತಪಟ್ಟಿದ್ದನು. ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಪಾಟೀಲ್ ಸಿ. ವಿ. ಗುತ್ತಿಗೆದಾರರಾದ ಫಕ್ಕೀರೇಶ ನಾಗಠಾಣಾ ಮತ್ತು ಮಂಜು ಧಾರವಾಡ ವಿರುದ್ಧ ಗ್ರಾಮೀಣ ಎಫ್‌ಐಆರ್ ದಾಖಲಾಗಿದೆ.
ಕಳಪೆ ಕಟ್ಟಡ ಕಾಮಗಾರಿ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದರಿಂದ ಕೊಠಡಿಯ ಗೋಡೆ ಕುಸಿದು ಬಾಲಕ ಮೃತಪಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಶ್ರುತ್ ಬಳಗಲಿ ನಿವಾಸಕ್ಕೆ ಗ್ರಾಮೀಣ ಬಿಇಒ ಅಶೋಕ ಸಿಂದಗಿ, ತಹಶೀಲ್ದಾರ್ ಪ್ರಕಾಶ ನಾಶಿ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ಶಿಕ್ಷಣ ಇಲಾಖೆಯಿಂದ 1 ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಿದ ಬಿಇಒ, ಅಚಾತುರ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಭರವಸೆ ನೀಡಿದ್ದರು. ಆದರೆ, ಈವರೆಗೂ ಕುಟುಂಬದವರನ್ನು ಸಂಪರ್ಕಿಸಿಲ್ಲ. ಬಾಲಕನ ಸಾವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ಅವನನ್ನೇ ನಂಬಿದ್ದ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ. ಅವರಿಂದ ಪರಿಹಾರ ಪಡೆಯುವವರೆಗೂ ನಾವು ಬಿಡುವುದಿಲ್ಲ ಎಂದು ಗ್ರಾಮದ ಮುಖಂಡ ಗುರುರಾಯನ ಗೌಡ ಹೇಳಿದರು.
ಘಟನೆಯಲ್ಲಿ ಗಾಯಗೊಂಡಿದ್ದ 7ನೇ ತರಗತಿಯ ಪ್ರಭು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಲು ಹಾಗೂ ಎದೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ಪ್ರಭು ಪ್ರತಿಕ್ರಿಯಿಸಿದ್ದು, "ನಾವು ಮೂತ್ರ ವಿಸರ್ಜನೆ ಮಾಡುವಾಗ ಕಟ್ಟಡ ಕುಸಿದು ಮೈಮೇಲೆ ಇಟ್ಟಿಗೆ ಬಿತ್ತು. ಆಗ ನನ್ನ ಕಾಲು ಸಿಕ್ಕಿಹಾಕಿಕೊಂಡಿತು. ಎದೆ ಮೇಲೆ ಇಟ್ಟಿಗೆ ಬಿತ್ತು. ವಿಶ್ರುತ್ 2 ನೇ ತರಗತಿಯಲ್ಲಿ ಓದುತ್ತಿದ್ದ. ನಾನು 7 ನೇ ತರಗತಿ ಓದುತ್ತಿದ್ದೇನೆ. ನಾವು ಗೋಡೆ ಮೇಲೆ ಜಿಗಿದಿಲ್ಲ, ಗೋಡೆಯನ್ನು ಕೂಡಾ ಮುಟ್ಟಿಲ್ಲ. ಅದಾಗಿಯೇ ನಮ್ಮ ಮೇಲೆ ಬಿತ್ತು" ಎಂದಿದ್ದನು.
ಘಟನೆಯ ದಿನ ತಹಶೀಲ್ದಾರ್ ಪ್ರಕಾಶ ನಾಸಿ ಈ ಕುರಿತು ಪ್ರತಿಕ್ರಿಯಿಸಿ, ಶಾಲೆಯಲ್ಲಿ ವಿದ್ಯಾರ್ಥಿ ಅಸುನೀಗಿದ ಮಾಹಿತಿ ಬಂದ ತಕ್ಷಣವೇ ನಾನು ಕೆಎಂಸಿಗೆ ಭೇಟಿ ನೀಡಿದ್ದೆ. ಡಿಡಿಪಿಐ, ಬಿಇಓ, ಪಿಡ್ಬ್ಲೂಡಿಯವರು ಸಂಬಂಧಪಟ್ಟ ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಒಬ್ಬ ವಿದ್ಯಾರ್ಥಿ ಅಸುನೀಗಿದ್ದಾನೆ. ಇನ್ನೊಬ್ಬನ ಕಾಲು, ಎದೆಗೆ ಪೆಟ್ಟಾಗಿದೆ. ಆ ಬಗ್ಗೆ ವೈದ್ಯರೊಂದಿಗೆ ಮಾತಾಡಿದೆ. ಈಗ ಅವನಿಗೆ ಏನೂ ತೊಂದರೆ ಇಲ್ಲ. ಸರ್ಕಾರದಿಂದ ಅವನಿಗೆ ಪರಿಹಾರವನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದರು.
ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿತ: ವಿದ್ಯಾರ್ಥಿ ಸಾವು, ಇನ್ನೊಬ್ಬ ಬಾಲಕನ ಸ್ಥಿತಿ ಗಂಭೀರ