ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರ ವಿವಾದಕ್ಕೆ ಸಂಬಂಧಿಸಿದಂತೆ ಮಠದಲ್ಲಿ ನಾಳೆ ಸತ್ಯದರ್ಶನ ಸಭೆ ಕರೆದಿರುವುದು ನನ್ನ ಮನಸ್ಸಿಗೆ ನೋವಾಗಿದೆ. ಸ್ವಾಮೀಜಿಯವರು ಕೂಡಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಉನ್ನತಮಟ್ಟದ ಸಮಿತಿ ಸದಸ್ಯ ಶಂಕ್ರಣ್ಣ ಮುನವಳ್ಳಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಂಕ್ರಣ್ಣ ಮುನವಳ್ಳಿ, ಈ ವಿಷಯ ಕುರಿತಂತೆ ನಿನ್ನೆ ಸ್ವಾಮೀಜಿ ಜೊತೆಗೆ ಮಾತನಾಡಿದ್ದೇವೆ. ಸ್ವಾಮೀಜಿಯವರು ಕೂಡ ಸಭೆಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧ ಎಂದಿದ್ದಾರೆ ಎಂದರು. ಇಂತಹ ಘಟನೆಗಳು ಯಾವುದೇ ಸಮಾಜದಲ್ಲಿ ನಡೆಯಬಾರದು. ದಿಂಗಾಲೇಶ್ವರ ಸ್ವಾಮೀಜಿಯವರು ಈ ರೀತಿಯಾಗಿ ಮಠಕ್ಕೆ ಸತ್ಯಶೋಧನೆಗೆ ಬರುತ್ತಿರುವುದು ತಪ್ಪು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ 23ರಂದು ಸಭೆ ಮಾಡುವುದು ಸಮಂಜಸವಲ್ಲ. ಸ್ವಾಮೀಜಿಯವರ ಒಪ್ಪಿಗೆ ಪಡೆದುಕೊಂಡು ಯಾರನ್ನು ಸಹ ಸಭೆಗೆ ಕರೆದಿಲ್ಲ ಎಂದರು.
ದಿಂಗಾಲೇಶ್ವರ ಸ್ವಾಮೀಜಿಯವರು ಸತ್ಯದರ್ಶನ ಸಭೆ ಮಾಡಿಕೊಂಡು ಅಲೆದಾಡುವುದರಲ್ಲಿ ಅರ್ಥವಿಲ್ಲ. ಶ್ರೀ ಮಠವೇ ತೆರೆದ ಪುಸ್ತಕದಂತಿದೆ, ಸತ್ಯದರ್ಶನದ ಅಗತ್ಯವಿಲ್ಲ. ಈ ಸಮಸ್ಯೆ ಏನು ದೊಡ್ಡದಲ್ಲ, ಆದಷ್ಟು ಬೇಗ ಸಮಾಜದ ಪ್ರಮುಖರು ಬಗೆಹರಿಸಲಿದ್ದಾರೆ ಎಂದರು.
ನಾಳೆ ಉನ್ನತಮಟ್ಟದ ಸದಸ್ಯರ ಸಭೆ ಕರೆಯಲಾಗಿದ್ದು, ಮೂಜಗು ಶ್ರೀಗಳ ಸಮ್ಮುಖದಲ್ಲಿ ಉನ್ನತಮಟ್ಟದ ಸಮಿತಿಯ ಸದಸ್ಯರಾದ ಮೋಹನ ಲಿಂಬಿಕಾಯಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ವೀರಣ್ಣ ಮತ್ತಿಕಟ್ಟಿ, ಬಸವರಾಜ ಹೊರಟ್ಟಿ ಪಾಲ್ಗೊಳ್ಳಲಿದ್ದಾರೆ. ಉತ್ತರಾಧಿಕಾರ ವಿವಾದದ ಹಿನ್ನೆಲೆ ವಿಸ್ತೃತವಾದ ಚರ್ಚೆ ನಡೆಸಿ ಈ ವಿವಾದವನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ ಎಂದರು.