ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಜೆಡಿಎಸ್ ಪಕ್ಷಕ್ಕೆ ಬಂದರೆ ಅವರನ್ನು ಆದರದಿಂದ ಸ್ವಾಗತಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿ ಈದ್ಗಾ ಮೈದಾನ ವಿಚಾರವಾಗಿ ನಾನು ಮತ್ತು ಎಸ್ ಆರ್ ಬೊಮ್ಮಾಯಿ ಅವರು ಸೂಕ್ತ ನಿರ್ಧಾರ ಕೈಗೊಂಡಿದ್ದೆವು. ಇದೀಗ ಪಾಪ ಬೊಮ್ಮಾಯಿ ಅವರು ಬಿಜೆಪಿ ಸೇರಿ ತಬ್ಬಲಿ ಆಗಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಸಂಪೂರ್ಣ ವಿಫಲ: ಸದ್ಯ ಬಸವರಾಜ ಬೊಮ್ಮಾಯಿ ಅವರ ಸ್ಥಿತಿ 2ಎ, ಎಸ್ಸಿ, ಎಸ್ಟಿ ಹಾಗೂ ಕುರುಬ ಸಮಾಜದ ಮೀಸಲಾತಿ ವಿಚಾರದ ನಡುವೆ ಸಿಲುಕಿ ಹಾಕಿಕೊಂಡಿದ್ದಾರೆ. ಒಂದು ಕಡೆಗೆ ಕೇಶವ ಕೃಪ, ಇನ್ನೊಂದೆಡೆ ಬಸವ ಕೃಪದಿಂದ ಒದ್ದಾಡುತ್ತಿದ್ದಾರೆ. ಇದರಿಂದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹರಿಹಾಯ್ದರು.
ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಕೆ: ಜೆಡಿಎಸ್ ಶಿಕ್ಷಣ, ಆರೋಗ್ಯ, ನೀರಾವರಿಯ ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಪಂಚರತ್ನ ಯಾತ್ರೆ ನಡೆಸುತ್ತಿದೆ. ಅದರಲ್ಲಿ ಮುಖ್ಯವಾಗಿ ಮಹದಾಯಿ, ಕೃಷ್ಣ, ಮಲಪ್ರಭಾ, ಘಟಪ್ರಭಾ ನದಿಯ ಒಂದಿಚ್ಚು ನೀರನ್ನು ಸಮುದ್ರಕ್ಕೆ ಸೇರಲು ಬಿಡುವುದಿಲ್ಲ. ಬದಲಾಗಿ ರೈತರ ಕೃಷಿಗೆ ಇಲ್ಲವೇ ಜನರಿಗೆ ಕುಡಿವ ನೀಡುವ ಉದ್ದೇಶ ಹೊಂದಿದ್ದೇವೆ. ಗ್ರಾಮ ಮಟ್ಟದಲ್ಲಿ ಮಹಿಳಾ ಸಬಲೀಕರಣ, ಯುವಕರಿಗೆ ಉದ್ಯೋಗ, ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಕೆ ಮಾಡಿ ಹೆಚ್ಚು ಉತ್ಪನ್ನ ಬೆಳೆಯುವ ಯೋಜನೆ ತರಲಿದ್ದೇವೆ ಎಂದರು.
ರೈತರಿಗೆ ಬೆಂಬಲ ಬೆಲೆ: ಸದ್ಯ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಈ ಹಿಂದೆ ದಿವಂಗತ ನಂಜುಂಡಪ್ಪ ತಯಾರಿಸಿದ ವರದಿಯಂತೆ ರೈತರಿಗೆ ಬೆಂಬಲ ಬೆಲೆ ಕೊಡಲಾಗುವುದು ಎಂದು ತಿಳಿಸಿದರು.
40 ಸ್ಥಾನ ಗೆಲ್ಲಲಿದ್ದೇವೆ: ರಾಜ್ಯದ ಸಾರಿಗೆಯಲ್ಲಿ ಯಾವುದೇ ನಿಯಂತ್ರಣವಿಲ್ಲ. ಹೀಗಾಗಿ ಸಾರಿಗೆ ನಿಗಮದಿಂದ ಸರ್ಕಾರಕ್ಕೆ ಯಾವುದೇ ಲಾಭವಿಲ್ಲದಂತೆ ಆಗಿದೆ. ಆದರೆ ನಮ್ಮ ಸರ್ಕಾರ ಬಂದಲ್ಲಿ ಸಾರಿಗೆಯಿಂದಲೇ ಶೇ. 20 ರಷ್ಟು ಲಾಭ ಮಾಡಿ ಬಜೆಟ್ಗೆ ಬಳಕೆ ಮಾಡಿಕೊಳ್ಳುತ್ತೇವೆ. ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಜನರು ರೋಸಿ ಹೋಗಿದ್ದು, ಬರುವ ಚುನಾವಣೆಯಲ್ಲಿ ಕನಿಷ್ಠ 123 ಸೀಟ್ಗಳಲ್ಲಿ ಜೆಡಿಎಸ್ ಗೆಲ್ಲುವ ವಿಶ್ವಾಸವಿದೆ. ಅದರಲ್ಲಿ ಹಳೇ ಮೈಸೂರು ಭಾಗದಲ್ಲಿ 40 ಸ್ಥಾನ ಗೆಲ್ಲಲಿದ್ದೇವೆ ಎಂದು ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.
ವರುಣಾದಲ್ಲಿಯೇ ಸ್ಪರ್ಧೆ ಮಾಡಲಿ: ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಯಾವುದೇ ಕ್ಷೇತ್ರದಲ್ಲಿ ನಿಂತರೂ ಸೋಲುವುದು ಖಚಿತ. ಹೀಗಾಗಿ ಅವರು ಕಾರ್ಯಕರ್ತರ ಮೂಲಕ ಸ್ಪರ್ಧೆ ಮಾಡದಂತೆ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ನನಗೆ ಪ್ರೀತಿ ಇದೆ. ಹೀಗಾಗಿ ಅವರು ಕೋಲಾರ ಬಿಟ್ಟು ವರುಣಾದಲ್ಲಿಯೇ ಸ್ಪರ್ಧೆ ಮಾಡಲಿ ಎಂದು ಸಲಹೆ ಕೊಟ್ಟರು.
ಧಾರವಾಡ ಜಿಲ್ಲೆಯಲ್ಲಿ ಬಸವರಾಜ ಹೊರಟ್ಟಿ, ಎನ್. ಹೆಚ್ ಕೊನರೆಡ್ಡಿ ಕೊಡುವ ಸ್ಥಾನದಲ್ಲಿದ್ದರು. ಇದೀಗ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಗಿ ಬೇಡುವ ಸ್ಥಾನದಲ್ಲಿ ನಿಂತಿದ್ದಾರೆಂದು ದೂರಿದರು.
ಓದಿ: ತಾಳಿ ಕಟ್ಟಿದವರಿಗೆ ನಾವು ಕೈ ಹಾಕುವುದಿಲ್ಲ, ಕನ್ಯೆ ಇದ್ದರೆ ಆಫರ್ ನೀಡುತ್ತೇವೆ: ಸಿ ಎಂ ಇಬ್ರಾಹಿಂ