ಧಾರವಾಡ: ಮುಂಗಾರು ಮಳೆ ತಡವಾಗುತ್ತಿರುವ ಕಾರಣ ಆತಂಕದಲ್ಲಿರುವ ಅನ್ನದಾತರು ದೇವರ ಮೊರೆ ಹೋಗಿದ್ದಾರೆ. ಉತ್ತಮ ಮಳೆ-ಬೆಳೆಗಾಗಿ ಗ್ರಾಮದ ಬಸವಣ್ಣ ದೇವರಿಗೆ ಭಜನೆ ಮಾಡುವ ಮೂಲಕ ಪ್ರಾರ್ಥಿಸಿದ್ದಾರೆ.
ಜೂನ್ ತಿಂಗಳು ಮುಗಿಯುತ್ತ ಬಂದರು ಇಲ್ಲಿಯವರೆಗೂ ಸಮರ್ಪಕವಾಗಿ ಮಳೆಯಾಗದಿರುವುದು ಅನ್ನದಾತರನ್ನು ಕಂಗಾಲಾಗಿಸಿದೆ. ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದ ರೈತರು ಸಾಮೂಹಿಕವಾಗಿ ಗ್ರಾಮದ ಹೊರ ವಲಯದಲ್ಲಿರುವ ಬಸವಣ್ಣನ ದೇವಸ್ಥಾನದಲ್ಲಿ ಭಜನೆ ಮೂಲಕ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಗ್ರಾಮಸ್ಥರೆಲ್ಲ ಸೇರಿ ದೇವಸ್ಥಾನದಲ್ಲಿಯೇ ಅಡುಗೆ ಮಾಡಿ ದೇವರಿಗೆ ನೈವೇದ್ಯ ಸಮರ್ಪಿಸಿದದರು. ಬಳಿಕ ಸಾಮೂಹಿಕವಾಗಿ ಮಳೆಗಾಗಿ ಪ್ರಾರ್ಥಿನೆ ಸಲ್ಲಿಸಿದರು. ಮಳೆ ಕೊರತೆ ಉಂಟಾದಾಗ ಬ್ಯಾಲಾಳ ಗ್ರಾಮದ ಬಸವಣ್ಣನಿಗೆ ಪ್ರಾರ್ಥಿಸಿದ್ರೆ ಉತ್ತಮ ಮಳೆಯಾಗುವ ನಂಬಿಕೆ ಇದೆ. ಹೀಗಾಗಿ ಸಂಪ್ರದಾಯದಂತೆ ಪ್ರಾರ್ಥಿಸಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಮಳೆಗಾಗಿ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ಕೆ ಇಡೀ ಗ್ರಾಮವೇ ಸಾಥ್ ನೀಡಿತ್ತು.