ಹುಬ್ಬಳ್ಳಿ: ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಮಾಡುವುದರೊಂದಿಗೆ ನಗರದಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ಗಳ ಸಂಚಾರ ಮತ್ತೆ ಆರಂಭಿಸಲಾಗಿದೆ. ಗೋವಾ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಆ ರಾಜ್ಯಕ್ಕೆ ಪ್ರವೇಶಿಸುವ ಅನ್ಯ ರಾಜ್ಯಗಳ ಪ್ರಯಾಣಿಕರು 72 ಗಂಟೆಗಳ ಮುಂಚಿತವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ.
ಕರ್ನಾಟಕದಿಂದ ನಿತ್ಯ ನೂರಾರು ಜನರು ಕೆಲಸ ಕಾರ್ಯಗಳಿಗಾಗಿ ಗೋವಾಗೆ ತೆರಳುತ್ತಾರೆ. ಆದರೆ ಪ್ರಯಾಣಕ್ಕೆ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಬಹಳಷ್ಟು ತೊಂದರೆಯಾಗಿತ್ತು. ಪರೀಕ್ಷೆ ಮಾಡಿಸಿಕೊಳ್ಳದೆ ತೆರಳುವವರಿಗೆ ಗೋವಾ ಗಡಿಯಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿ 270 ರೂ. ಶುಲ್ಕ ವಿಧಿಸಲಾಗುತ್ತಿತ್ತು.
ಪರೀಕ್ಷೆಯಲ್ಲಿ ಒಂದುವೇಳೆ ಸೋಂಕು ದೃಢಪಟ್ಟರೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಇದರಿಂದ ಅಲ್ಲಿಯವರೆಗೂ ಪ್ರಯಾಣ ಮಾಡಿದವರು ತೀವ್ರ ಸಂಕಷ್ಟ ಅನುಭವಿಸಬೇಕಾಗಿತ್ತು. ಅಂತವರ ಅನುಕೂಲಕ್ಕಾಗಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ನೆಗೆಟಿವ್ ವರದಿ ಹೊಂದಿರುವ ಪ್ರಯಾಣಿಕರಿಗೆ ಗೋವಾ ತೆರಳಲು ಅನುವು ಮಾಡಿಕೊಡಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
ಗೋವಾ ಹೋಗುವವರು ಏನೇನು ಮಾಡಬೇಕು?
ಗೋವಾಗೆ ಪ್ರಯಾಣಿಸುವವರು ಬೆಳಗ್ಗೆ 10 ಗಂಟೆಯ ಒಳಗೆ ಗೋಕುಲ ರಸ್ತೆಯ ಬಸ್ ನಿಲ್ದಾಣಕ್ಕೆ ಆಗಮಿಸಿರಬೇಕು. ಅಲ್ಲಿ ಅವರಿಗೆ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಲು ತಾಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಯಾಣಿಕರಿಗೆ ಮೊದಲು ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗುತ್ತದೆ. ಅದರಲ್ಲಿ ನೆಗೆಟಿವ್ ವರದಿ ಬಂದವರಿಗೆ ಮಾತ್ರವೇ ಆರ್ಟಿಪಿಸಿಆರ್ ಪರೀಕ್ಷೆ ಮಾಡಿ ಮುಂದಿನ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಲಾಕ್ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿನಿತ್ಯ ಪಣಜಿಗೆ 1 ರಾಜಹಂಸ ಮತ್ತು 8 ವೇಗದೂತ ಬಸ್, ವಾಸ್ಕೋಗೆ 1 ಮತ್ತು ಮಡಗಾಂವ್ಗೆ 1 ಒಟ್ಟು 11 ಬಸ್ಗಳು ಸಂಚರಿಸುತ್ತಿದ್ದವು. ಲಾಕ್ಡೌನ್ ಕಾರಣದಿಂದಾಗಿ ಕಳೆದ ಏಪ್ರಿಲ್ 27 ರಿಂದ ಈ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಭಾಗಶಃ ನಿರ್ಬಂಧಗಳ ತೆರವು ಹಿನ್ನೆಲೆ ಮೊದಲ ಹಂತದಲ್ಲಿ ಪಣಜಿಗೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಬಸ್ಗಳು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಸಂಚರಿಸುತ್ತವೆ. ಪ್ರಯಾಣಿಕರ ಬೇಡಿಕೆ ಗಮನಿಸಿ ಮುಂದಿನ ದಿನಗಳಲ್ಲಿ ವಾಸ್ಕೋ ಮತ್ತು ಮಡಗಾಂವ್ಗೆ ಬಸ್ಗಳನ್ನು ಓಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಾವು: ಗರಿಗೆದರಿದ ಕಿಟ್ ಪಾಲಿ'ಟ್ರಿಕ್ಸ್'