ಹುಬ್ಬಳ್ಳಿ: ''ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯು ಅತ್ತು ಕರೆದು ಮಾಡಿರೋ ತರಹ ಕಾಣುತ್ತಿದೆ. ಕಳೆದ ಆರು ತಿಂಗಳಿಂದ ಬಿಜೆಪಿ ನಾಯಕನ ಆಯ್ಕೆ ಮಾಡಿರಲಿಲ್ಲ. ಆದ್ರೆ, ಇವಗ್ಯಾಕೆ ಆಯ್ಕೆ ಮಾಡಿದ್ರು'' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ರಾಜಕೀಯ ಪಕ್ಷ ಆಗಿ ತಕ್ಷಣವೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕಿತ್ತು. ಆದ್ರೆ ಬಿಜೆಪಿ ಈ ವಿಚಾರದಲ್ಲಿ ಸಂಪೂರ್ಣ ಫೇಲ್ ಆಗಿದೆ'' ಎಂದರು. ಲಿಂಗಾಯತ ನಾಯಕರಿಗೆ ಮಣೆ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಅಂತೂ ಆರು ತಿಂಗಳ ಮೇಲೆ ಅಧ್ಯಕ್ಷರನ್ನು ಮಾಡಿದ್ದಾರೆ. ನಾನು ಕಾಂಗ್ರೆಸ್ನಲ್ಲಿ ಇದ್ದಿನಿ, ಅಧ್ಯಕ್ಷರ ಆಯ್ಕೆ ಅವರ ಪಕ್ಷಕ್ಕೆ ಬಿಟ್ಟ ವಿಚಾರ'' ಎಂದು ಹೇಳಿದರು.
''ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಬಲಾಢ್ಯವಾಗಿ ಬೆಳೆದಿದೆ. ಉತ್ತಮವಾಗಿ ಕೆಲಸ ಮಾಡುತ್ತಿದೆ. ಬಹಳ ದಿನಗಳ ನಂತರ ಬಿಜೆಪಿ ರಾಜ್ಯಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಸದ್ಯ ಬಿಜೆಪಿ ನಾಯಕರು ಭ್ರಮೆಯಲ್ಲಿದ್ದಾರೆ. ಈಗಾಗಲೇ ಬೇರೆ ಕಡೆ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. 50 ರಿಂದ 60 ಶಾಸಕರನ್ನು ಕರೆದುಕೊಂಡು ಬಂದು ಮತ್ತೆ ಸರ್ಕಾರ ರಚನೆ ಮಾಡುವ ಭ್ರಮೆಯಲ್ಲಿ ಇದ್ದರು. ಆದ್ರೆ ಈ ಕಾರ್ಯ ಸಾಧ್ಯಗಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಹಿಂದೆ ಏನೇ ಇರಲಿ, ಅದಕ್ಕೆ ಜನ ಉತ್ತರ ನೀಡುತ್ತಾರೆ'' ಎಂದ ಅವರು, ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾರೆ. ಪವರ್ ಶೇರಿಂಗ್ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಅದು ಕೇವಲ ಚರ್ಚೆಗೆ ಸೀಮಿತವಾಗಿದೆ. ಪಂಚ ರಾಜ್ಯದ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಇರುತ್ತದೆ'' ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನಿರೀಕ್ಷಿಸಿರಲಿಲ್ಲ: ''ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವು ಬಿ ವೈ ವಿಜಯೇಂದ್ರಗೆ ಸಿಗುತ್ತೆ ಎಂದು ನಾವ್ಯಾರು ನಿರೀಕ್ಷೆ ಇಟ್ಟಿರಲಿಲ್ಲ. ದೆಹಲಿಗೆ ಹೋಗಿ ನನ್ನ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಕೇಳಿರಲಿಲ್ಲ. ದೊಡ್ಡ ಸ್ಥಾನ ಸಿಕ್ಕಿದಾಗ ಎದುರಾಗುವ ಸವಾಲುಗಳು ಸಹಜ. ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸುವುದು ಕಷ್ಟವಿಲ್ಲ. ಆದ್ರೂ ಕೂಡ ದಾರಿ ಕಠಿಣವಿದೆ. ನಾನೂ ಕೂಡ ರಾಜ್ಯ ಪ್ರವಾಸ ಕೈಗೊಂಡು ಹೆಚ್ಚಿನ ಸ್ಥಾನ ಗೆಲ್ಲಲು ಶ್ರಮವಹಿಸುತ್ತೇನೆ'' ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಡಾಲರ್ಸ್ ಕಾಲೊನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರು ಸೂಕ್ತ ಸಮಯಕ್ಕೆ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತುಂಬಿದ್ದಾರೆ. ರಾಜ್ಯ ಪ್ರವಾಸ ಕೈಗೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಗುರಿ ಹೊಂದಿದ್ದೇವೆ. ರಾಜ್ಯದಲ್ಲಿ, ಈ ಬಾರಿ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ಪ್ರವಾಸ ಮಾಡುತ್ತೇನೆ'' ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನಿರೀಕ್ಷಿಸಿರಲಿಲ್ಲ, ಅವಕಾಶ ಕೇಳಿಯೂ ಇರಲಿಲ್ಲ: ಯಡಿಯೂರಪ್ಪ