ಹುಬ್ಬಳ್ಳಿ: ಬಿಜೆಪಿಯ ಕೆಲವು ಆಂತರಿಕ ಸಮಸ್ಯೆಗಳಿಂದ ನನಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ನೀಡುತ್ತಿಲ್ಲ. ಪಕ್ಷದ ಕೆಲ ಪರಿಷತ್ ಸದಸ್ಯರು ನನ್ನನ್ನು ಸಭಾಪತಿ ಮಾಡಲು ವಿರೋಧ ವ್ಯಕ್ತಪಡಿಸಿದ್ದರು. ಈಗ ಅವರೆಲ್ಲರನ್ನೂ ಸಮಾಧಾನಪಡಿಸಲಾಗಿದ್ದು, ನನ್ನನ್ನು ಸಭಾಪತಿ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ನನ್ನನ್ನು ಸಭಾಪತಿ ಮಾಡುವ ಭರವಸೆ ಇದೆ. ಆದರೆ ಈಗ ಅದಕ್ಕೆನೂ ಅವಸರವಿಲ್ಲ. ಮೊನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಮಾಡಿಕೊಲಾಗಿದೆ. ಅಧಿವೇಶನ ಪ್ರಾರಂಭವಾದ ನಂತರ ನನ್ನನ್ನು ಸಭಾಪತಿ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಹೊರಟ್ಟಿ ಅವರನ್ನು ಸೈಡ್‌ಲೈನ್ ಮಾಡಲಾಗುತ್ತಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸೈಡ್‌ಲೈನ್ ಮಾಡಿದ್ದಾರೋ, ಯಾವ ಲೈನ್ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಅಧಿಕಾರ ಇದ್ದುಕೊಂಡೇ ಕೆಲಸ ಮಾಡಬೇಕಂತೇನಿಲ್ಲ. ಬಿಜೆಪಿ ಹೈಕಮಾಂಡ್, ಸಿಎಂ ಯಾವಾಗ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ. ಅವರ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದರು.
31 ಮಂದಿ ಪರಿಷತ್ ಸದಸ್ಯರಲ್ಲಿ 27 ಜನರು ನನ್ನ ಪರವಾಗಿದ್ದಾರೆ. ಕೇವಲ ನಾಲ್ಕು ಜನರು ನನಗೆ ವಿರೋಧ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಬಿಜೆಪಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ, ನನ್ನ ವಿಧಾನ ಪರಿಷತ್ ಸಭಾಪತಿ ಸ್ಥಾನ ಮಾಡುತ್ತಾರೆಂಬ ಭರವಸೆ, ನಂಬಿಕೆ ಇದೆ. ಯಡಿಯೂರಪ್ಪ ನೇರವಾಗಿ ಹೇಳಿದ್ದಾರೆ, ನಮ್ಮ ನಾಲಿಗೆ ಒಂದೇ ಇರಬೇಕು ಅವರನ್ನು ಸಭಾಪತಿ ಮಾಡಬೇಕೆಂದು ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಹಿಜಾಬ್ ವಿವಾದ ಪ್ರಕರಣ.. ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ?