ಹುಬ್ಬಳ್ಳಿ: ಗಣೇಶ ನಿಮಜ್ಜನ ವೇಳೆ ದುಷ್ಕರ್ಮಿಗಳಿಂದ ಚಾಕು ಇರಿತಕ್ಕೊಳಗಾಗಿದ್ದ ವಿದ್ಯಾರ್ಥಿವೋರ್ವ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.
ಬಸವರಾಜ್ ವಿರೇಶ್ ಶಿವೂರ (21) ಸಾವನ್ನಪ್ಪಿರುವ ವಿದ್ಯಾರ್ಥಿ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ನಿವಾಸಿಯಾಗಿದ್ದ ಈತ, ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದ.
ಅಷ್ಟಕ್ಕೂ ಆಗಿದ್ದೇನು?
ನಿನ್ನೆ ಗೆಳೆಯರೊಂದಿಗೆ ಗಣೇಶ ನಿಮಜ್ಜನ ನೋಡಲು ಬಂದಿದ್ದ ಬಸವರಾಜ್ ಹಾಗೂ ಆತನ ಸ್ನೇಹಿತರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ನಗರದ ಐದು ಕಡೆ ಹಿಂಬಾಲಿಸಿ ದುಷ್ಕರ್ಮಿಗಳು ಚಾಕುವಿನಲ್ಲಿ ಇರಿದಿದ್ದಾರೆ. ನಗರದ ಹರ್ಷ ಕಾಂಪ್ಲೆಕ್ಸ್, ದುರ್ಗದ ಬೈಲ್, ಸಂಗೊಳ್ಳಿ ರಾಯಣ್ಣ ವೃತ್ತ, ಹಳೆ ಹುಬ್ಬಳ್ಳಿಯಲ್ಲಿ ಚಾಕು ಇರಿತವಾಗಿದೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಸವರಾಜ್ನನ್ನು ಸ್ಥಳೀಯರು ಕಿಮ್ಸ್ಗೆ ದಾಖಲಿಸಿದ್ದರು. ಇನ್ನುಳಿದ ಐವರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಈ ಕುರಿತು ಶಹರ್ ಉಪನಗರ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.